ಅತ್ಯಾಚಾರ: ಸರ್ಕಾರ ತನಿಖೆ ದಿಕ್ಕು ತಪ್ಪಿಸುತ್ತಿದೆ- ಸಿಪಿಎಂ ಆರೋಪ
ಕ.ಪ್ರ. ವಾರ್ತೆ , ಉಡುಪಿ , ಜೂ.28
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಣಿಪಾಲ ವಿವಿಯನ್ನು ರಕ್ಷಿಸುವುದಕ್ಕಾಗಿ ಕೇಂದ್ರ, ಕರ್ನಾಟಕ ಮತ್ತು ಕೇರಳ ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಒಂದಾಗಿ ತನಿಖೆಯ ದಿಕ್ಕು ತಪ್ಪಿಸುತ್ತಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅತ್ಯಾಚಾರದ ಘಟನೆ ನಡೆದ ಮೇಲೆ ರಾಜ್ಯದ ಗೃಹಸಚಿವ ಕೆ.ಜೆ. ಜಾರ್ಜ್ ಮಣಿಪಾಲಕ್ಕೆ ಭೇಟಿ ನೀಡಿದ ಮೇಲೆ ತನಿಖೆಯ ದಿಕ್ಕು ಬದಲಾಗಿದೆ. ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಣಿಪಾಲಕ್ಕೆ ಆಗಮಿಸುತ್ತಾರೆ ಎಂದು ತಿಳಿದಾಗ ಮಣಿಪಾಲ ವಿವಿಯ ಕುಲಪತಿಗಳು ಅಲ್ಲಿಗೆ ಹೋಗಿ ಅವರ ಜತೆ ಮಾತನಾಡಿ ಮಣಿಪಾಲಕ್ಕೆ ಬರದಂತೆ ಒಪ್ಪಿಸಿ ಬಂದಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.
ಸರ್ಕಾರಗಳ ಇಂಥ ಧೋರಣೆಯಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಐಜಿಪಿ ಪ್ರತಾಪ್ ರೆಡ್ಡಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಮಣಿಪಾಲ ವಿವಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಮತ್ತು ಆಕೆಯ ಹೆತ್ತವರು ಯಾವುದೇ ದೂರು ನೀಡುವುದಕ್ಕೆ ಸಿದ್ಧರಿಲ್ಲ ಎಂದು ಐಜಿಪಿ ಹೇಳುತ್ತಿದ್ದಾರೆ. ಆದರೆ, ಆಕೆ ಪೊಲೀಸ್ ಅಧಿಕಾರಿಗಳಿಗೆ ತಾನು ಹೇಳಿಕೆ ನೀಡುವುದಿಲ್ಲ ಎಂದು ಹೇಳಿಲ್ಲ. ಏಕೆಂದರೆ ಪೊಲೀಸರು ಆಕೆಯ ಬಳಿ ಹೋಗಿ ಹೇಳಿಕೆಯನ್ನು ಪಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ವೈದ್ಯರು ಆಕೆ ಹೇಳಿಕೆ ನೀಡಲು ಸಿದ್ಧಳಿಲ್ಲ ಎಂದು ಹೇಳಿದ್ದನ್ನೇ ನಂಬಿಕೊಂಡು ಪೊಲೀಸರು ಸುಮ್ಮನಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ನ ತೀರ್ಪಿನಲ್ಲಿ ಅತ್ಯಾಚಾರಕ್ಕೊಳಗಾದವರ ಹೇಳಿಕೆಯನ್ನು ಗುಪ್ತವಾಗಿ ಪಡೆಯಬೇಕು ಎಂದು ಹೇಳಿದೆಯೇ ಹೊರತು ಹೇಳಿಕೆ ಪಡೆಯಬಾರದು ಎಂದಿಲ್ಲ. ಹೇಳಿಕೆ ಪಡೆಯುವುದಕ್ಕೆ ಬೇರೆ ಕಾನೂನುಗಳಿವೆ. ಅದರಂತೆ ಹೇಳಿಕೆ ಪಡೆಯಲೇಬೇಕು ಎಂದವರು ವಾದಿಸಿದರು.
ಬಹುಶಃ ಸಿಪಿಐಎಂ ನಾಯಕರಿಗೆ ಇಲ್ಲಿನ ವಾಸ್ತವ ಗೊತ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ, ಯಾವುದೇ ಒತ್ತಡಗಳಿಲ್ಲದೆ ತನಿಖೆ ನಡೆಸುವಂತೆ ಖುದ್ದು ರಾಜ್ಯದ ಗೃಹ ಸಚಿವರು ಉಡುಪಿಗೆ ಬಂದು ಆದೇಶಿಸಿದ್ದಾರೆ.
- ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ
ಯಾರು ಏನು ಆರೋಪಿಸುತ್ತಿದ್ದಾರೆ ಗೊತ್ತಿಲ್ಲ. ನಾವಂತೂ ಈ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದೇವೆ. ಎಲ್ಲಿಯೂ ತನಿಖೆ ದಿಕ್ಕು ತಪ್ಪಿಲ್ಲ. ನಮಗೆ ಯಾವುದೇ ಬಗೆಯ ಒತ್ತಡ ಬಂದಿಲ್ಲ. ಮಣಿಪಾಲ ವಿವಿಯೂ ನಮಗೆ ಎಲ್ಲ ರೀತಿಯಿಂದಲೂ ಸಹಕರಿಸುತ್ತಿದೆ.
- ಡಾ. ಬೋರಲಿಂಗಯ್ಯ ಎಂ.ಬಿ., ಉಡುಪಿ ಎಸ್ಪಿ