ಗ್ಯಾಂಗ್‌ರೇಪ್: ಹರಿಪ್ರಸಾದ್‌ಗೆ ಜು. 3ರವರೆಗೆ ಪೊಲೀಸ್ ಕಸ್ಟಡಿ
ಉಡುಪಿ: ಮಣಿಪಾಲ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳ ಪೈಕಿ ಒಬ್ಬನಾದ ಹರಿಪ್ರಸಾದ್ ಪೂಜಾರಿ (27)ಯನ್ನು ಉಡುಪಿ ಜಿಲ್ಲಾ ನ್ಯಾಯಾಲಯ ಜು.3ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಆರೋಪಿಯನ್ನು ಶುಕ್ರವಾರ ಬೆಳಗ್ಗೆ 12 ಗಂಟೆಗೆ ಜಿಲ್ಲಾ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ವಿಚಾರಣೆ ನಡೆಯಬೇಕಾಗಿರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದರಿಂದ ಆರೋಪಿಯನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಜೂ.20ರಂದು ವಿದ್ಯಾರ್ಥಿನಿಯನ್ನು ಮಣಿಪಾಲದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದರು. ಅವರಲ್ಲಿ ಪ್ರಮುಖ ಆರೋಪಿ ಯೋಗೀಶ್ ಪೂಜಾರಿ (30) ಗುರುವಾರ ಬೆಳಗ್ಗೆ ತನ್ನ ಮನೆಯ ಹಿಂದಿರುವ ಗುಡ್ಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಸಕಾಲಿಕ ಕಾರ್ಯಾಚರಣೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ. ಆಗ ಆತನ ಪರಿಸ್ಥಿತಿ ಗಂಭೀರವಾಗಿತ್ತು. ಶುಕ್ರವಾರ ಆತನ ಆರೋಗ್ಯ ಇನ್ನಷ್ಟು ಬಿಗಡಾಯಿಸಿದೆ.
ಮೂರನೇ ಆರೋಪಿ ಆನಂದ ಪಾಣಾರ (27) ಸಂಜೆ ಮನೆಯ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲೆತ್ನಿಸಿದ್ದು, ಮನೆಯವರು ಪಾರು ಮಾಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.