ಮಹಾಲನೋಬಿಸ್ ಜನ್ಮದಿನಾಚರಣೆ
ಉಡುಪಿ: ಗಾಂಧೀಜಿ, ಜವಾಹರ್ಲಾಲ್ ನೆಹರೂ, ಪ್ರೊ.ಪಿ.ಸಿ. ಮಹಾಲನೋಬಿಸ್ ಅವರಂತಹ ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಯನ್ನು ಆಚರಿಸುತ್ತೇವೆ. ಆದರೆ, ಅದು ಕೇವಲ ಅರ್ಧ ಗಂಟೆಗೆ ಮಾತ್ರ ಸೀಮಿತವಾಗಿ ಬಿಡುತ್ತದೆ. ಮತ್ತೆ ಅದನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ಎಂದಿಗೂ ಈ ರೀತಿಯ ತಪ್ಪನ್ನು ಮಾತ್ರ ಮಾಡಬೇಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿ. ವಿಜಯ ಕುಮಾರ್ ಶೆಟ್ಟಿ ಕರೆ ನೀಡಿದ್ದಾರೆ.
ಎಂಜಿಎಂ ಕಾಲೇಜಿನ ಸಭಾ ಭವನದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಎಂಜಿಎಂ ಕಾಲೇಜು ಸಹಯೋಗದಲ್ಲಿ ಶನಿವಾರ ಪ್ರೊ.ಪಿ.ಸಿ. ಮಹಾಲನೋಬಿಸ್ ಸಾಂಖ್ಯಿಕ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದು ಕಲಿತದ್ದನ್ನು ಮುಂದೆ ಕೆಲಸಕ್ಕೆ ಸೇರಿದಾಗ ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಅರಿತಿರಬೇಕು. ಮಹಾಲನೋಬಿಸ್ ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಪ್ರಗತಿ ಸಾಧ್ಯ. ಯುವಜನತೆ ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಧುನಿಕತೆಯನ್ನು ಆಳವಡಿಸಿಕೊಂಡರೆ ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕ ಪ್ರಗತಿಯೂ ಹೆಚ್ಚುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಎನ್. ಹಾಲಾ ನಾಯ್ಕ್ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಾಸ್ತಾವಿಕ ಮಾತನಾಡಿದರು. ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಯು. ಲವರಾಜ್ ಸ್ವಾಗತಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಎ. ನಾಗರಾಜ್ ರಾವ್ ವಂದಿಸಿದರು.
ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾಯಕ ನಿರ್ದೇಶಕ ರಮೇಶ್ ರಾವ್, ಕಾರ್ಮಿಕ ನಿರೀಕ್ಷಕ ರಾಮಚಂದ್ರ ಎಚ್. ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.