ಮೊಗವೀರ, ಗಂಗಾಮತಸ್ಥರನ್ನುಪ.ಪಂ.ಕ್ಕೆ ಸೇರಿಸಲು ಪ್ರಯತ್ನ
ಪಡುಬಿದ್ರಿ: ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ, 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮೊಗವೀರ, ಬೆಸ್ತ ಹಾಗೂ ಗಂಗಾಮತಸ್ಥ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಬೇಡಿಕೆ ಶೀಘ್ರ ಈಡೇರುವ ಭರವಸೆ ದೊರಕಿದೆ ಎಂದು ರಾಜ್ಯ ಬಂದರು ಮತ್ತು ಒಳನಾಡು ಜಲಸಾರಿಗೆ, ಜವಳಿ ಸಚಿವ ಬಾಬೂ ರಾವ್ ಚಿಂಚನಸೂರ್ ಹೇಳಿದ್ದಾರೆ.
ಇತ್ತೀಚೆಗೆ ದ.ಕ. ಮೊಗವೀರ ಮಹಾಜನ ಸಂಘ ಮತ್ತು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಆಶ್ರಯದಲ್ಲಿ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನೂತನ ಬಂದರು, ಮೀನುಗಾರಿಕೆ ಸಚಿವ, ಉಡುಪಿ ಮತ್ತು ದ.ಕ. ಜಿಲ್ಲಾ ಸಚಿವರು, ಶಾಸಕರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿ ಬಂದರುಗಳ ಅಭಿವೃದ್ಧಿ, ಕಡಲು ಕೊರೆತ ಮೊದಲಾದ ವಿಷಯಗಳಿಗೆ ಶೀಘ್ರ ಸ್ಪಂಧಿಸುವ ಭರವಸೆ ನೀಡಿದ ಚಿಂಚನಸೂರ್, ತಾನು ಭಾಷಣ ಮಾಡುವ ಮಂತ್ರಿಯಲ್ಲ. ಕೆಲಸ ಮಾಡುವ ಮಂತ್ರಿ, ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಅಭಿನಂದನೆ ಸ್ವೀಕರಿಸಿದ ಮೀನುಗಾರಿಕೆ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಮೀನುಗಾರರ ಎಲ್ಲ ಬೇಡಿಕೆಗಳ ಬಗ್ಗೆ ಎರಡು ದಿನದ ಹಿಂದೆ ಮೀನುಗಾರ ಮುಖಂಡರ ಜೊತೆಗೂಡಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ತಾನು ಜೈನ ಮತಸ್ಥನಾಗಿದ್ದು ಮೀನುಗಾರಿಕೆ ಸಚಿವನಾಗಿರುವುದಕ್ಕೆ ಯಾವುದೇ ಕೀಳರಿಮೆ ಇಲ್ಲ ಎಂದರು.
ಸಮಾರಾಂಭ ಉದ್ಘಾಟಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮಲ್ಪೆ- ಮಂಗಳೂರು ಬಂದರುಗಳಿಗೆ ಪೂರಕವಾಗಿ ಹೆಜಮಾಡಿ ಮೀನುಗಾರಿಕಾ ಬಂದರನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಉದ್ಯಮಿ ಜಿ. ಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಮಹಾಜನ ಸಂಘದ ಅಧ್ಯಕ್ಷ ಬಿ. ಕೇಶವ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿಯ ಶಾಸಕರಾದ ಪ್ರಮೋದ್ ಮಧ್ವರಾಜ್, ಮೊಯ್ದಿನ್ ಬಾವಾ, ಮಾಂಕಾಳಿ ಎಸ್. ವೈದ್ಯ ಭಟ್ಕಳ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ಮತ್ತು ಯು.ಆರ್. ಸಭಾಪತಿ, ಗಂಗಾಮತಸ್ಥ ಸಂಘದ ಅಧ್ಯಕ್ಷ ಧರ್ಮಪ್ಪ ಮತ್ತು ಮೊಗವೀರ ನಾಯಕರು ಇದ್ದರು.
ಜಯವಿಠಲ ಕುಂದರ್ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ನಿರ್ವಹಿಸಿದರು. ಸುಧಾಕರ ಕರ್ಕೇರ ವಂದಿಸಿದರು.