ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

143 ಮೀನುಗಾರ ಕುಟುಂಬ ಜಮೀನು ಹಕ್ಕುಪತ್ರಕ್ಕೆ ಸಂಪುಟ ಒಪ್ಪಿಗೆ

Rashmi Kasaragodu
Updated On : 2 Mar 2013, 12:03 pm

ಉಡುಪಿ: ಮಲ್ಪೆಯ ಕೊಳ ಮತ್ತು ಪಡುಕರೆ ಗ್ರಾಮಗಳಲ್ಲಿ ಸರ್ಕಾರಿ ಜಮೀನಿನನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿ ವಾಸಿಸುತ್ತಿರುವ ಸುಮಾರು 143 ಮೀನುಗಾರರ ಕುಟುಂಬಗಳಿಗೆ ಅಕ್ರಮ ಸಕ್ರಮ ಮಾಡಲು ಸರ್ಕಾರ ಮಂಜೂರಾತಿ ನೀಡಿದೆ.
ಈ ಹಿಂದೆ ಇಲ್ಲಿನ 230 ಕುಟುಂಬಗಳಿಗೆ ಅಕ್ರಮ ಸಕ್ರಮ ಮಾಡಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಉಳಿದ 143 ಕುಟುಂಬಗಳಿಗೆ ಅವು ವಾಸಿಸುತ್ತಿರುವ ಜಮೀನಿನ ಹಕ್ಕು ಪತ್ರಗಳನ್ನು ನೀಡುವುದಕ್ಕೆ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದೆ. ನಗರಾಡಳಿತ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಹಿಂದೆ ಈ 373 ಕುಟುಂಬಗಳು ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದಾಗ, ಈ ಭೂಮಿಯ ಪಹಣಿ ಪತ್ರಗಳಲ್ಲಿ ಸಮುದ್ರ ಎಂದು ನಮೂದಿಸಲಾಗಿದ್ದು, ಈ ಭೂಮಿಯ ಹಕ್ಕುಪತ್ರಗಳನ್ನು ನೀಡುವುದಕ್ಕೆ ಅವಕಾಶ ಇಲ್ಲದಿದ್ದರೂ, ಕಾಂಗ್ರೆಸ್ ಸರ್ಕಾರ ಈ ಬಡವರಿಗೆ ಹಕ್ಕು ಪತ್ರಗಳನ್ನು ನೀಡಿತ್ತು. ಆದರೆ ಕೊನೆವರೆಗೂ ಈ ಭೂಮಿ ಕಾನೂನು ಪ್ರಕಾರ ಅವರದಾಗಲೇ ಇಲ್ಲ. ಆದ್ದರಿಂದ ಬಹಳ ವರ್ಷಗಳಿಂದ ಕಾಂಗ್ರೆಸ್ ಈ ಬಡ ಕುಟಂಬಗಳಿಗೆ ಮೋಸ ಮಾಡಿತ್ತು ಎಂದವರು ಆರೋಪಿಸಿದ್ದಾರೆ.
ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪಹಣಿ ಪತ್ರದಲ್ಲಿ ಸಮುದ್ರ ಎಂಬ ಉಲ್ಲೇಖವನ್ನು ತೆಗೆದು ಗಡಿ ಎಂದು ನಮೂದಿಸಿ, ಆಗಿನ ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರಿಂದ 230 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿತ್ತು.
 ಉಳಿದ ಕುಟುಂಬಗಳಿಗೆ ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಝಡ್.) ಕಾಯ್ದೆಯ ಅಡ್ಡಿ ಇದ್ದುದರಿಂದ ಇದೀಗ ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಈ ಕಾಯ್ದೆ ಜಾರಿಗೆ ಬರುವುದಕ್ಕೂ ಮೊದಲು ಕಟ್ಟಲಾದ ಈ ಮನೆಗಳು ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಮಂಜೂರಾತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಭಟ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement