ಹೆಬ್ರಿ: ಆಕಸ್ಮಿಕ ಬೆಂಕಿಗೆ ಅಪಾರ ಹಾನಿ
ಹೆಬ್ರಿ: ಇಲ್ಲಿಗೆ ಸಮೀಪದ ಬೇಳಂಜೆಯ ಕೊಪ್ಪರಗುಂಡಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 2.30ಕ್ಕೆ ಹಲವು ಮನೆಗಳ ವಿದ್ಯುತ್ ಲೈನ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಗಳ ವಯರಿಂಗ್, ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಗುಲಾಬಿ ಕುಲಾಲ್ ಎಂಬವರ ಮನೆಯಲ್ಲೇ ಸುಮಾರು 4 ಲಕ್ಷದಷ್ಟು ಹಾನಿ ಸಂಭವಿಸಿದೆ. ಶಂಕರ ಶೆಟ್ಟಿ, ಸುಮತಿ ಶೆಟ್ಟಿ, ಭಾಸ್ಕರ ಶೆಟ್ಟಿ, ರೋಹಿಣಿ ಶೆಟ್ಟಿ, ಅಮೃತ ಕಮಾರ್ ಶೆಟ್ಟಿ ಸೇರಿದಂತೆ ಪರಿಸರದ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಭಾರಿ ಹಾನಿಯಾಗಿದೆ, ವಿದ್ಯುತ್ ಪಂಪ್, ವಯರಿಂಗ್, ಟಿವಿ, ಫ್ರಿಡ್ಜ್, ಸೋಲಾರ್ ಸೇರಿದಂತೆ ಬಹುತೇಕ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುಮಾರು 11 ಕೆವಿಯಷ್ಟು ವಿದ್ಯುತ್ ಸರಬರಾಜು ಆಗಿರುವುದರಿಂದ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಮೆಸ್ಕಾಂಗೂ ಹಾನಿಯಾಗುವ ಶಂಕೆ ಇದೆ ಎನ್ನಲಾಗಿದೆ. ನಾವು ಮಾಡದ ತಪ್ಪಿಗೆ ಭಾರಿ ಬೆಲೆ ತೆತ್ತಿದ್ದು, ವಿದ್ಯುತ್ ಇಲಾಖೆ ಯಾವುದೇ ಪರಿಹಾರ ನೀಡದಿರುವುದು ದುರದೃಷ್ಟಕರ ಎಂದು ಕೊಪ್ಪರಗುಂಡಿ ಶಂಕರ ಶೆಟ್ಟಿ ಹೇಳಿದರು. ಹೆಬ್ರಿ ಮೆಸ್ಕಾಂ ಅಧಿಕಾರಿ ಶ್ರೀಧರ ಪಿ.ಎಸ್, ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.