ಅಭಾವಿಪ ಪ್ರತಿಭಟನೆ
ಉಡುಪಿ: ರಾಜ್ಯ ಸರ್ಕಾರವು ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿಯನ್ನು ನೀಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೋಮವಾರ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪುತ್ಥಳಿ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಶಿಕ್ಷಣ ಮಂತ್ರಿ ಎಂದು ಕರೆಸಿಕೊಳ್ಳುವ ಸಿ.ಟಿ. ರವಿ ಅವರಿಗೆ ರಾಜ್ಯದಲ್ಲಿ ಎಷ್ಟು ಖಾಸಗಿ ವಿವಿಗಳು ಬೇಕು ಎಂಬುದು ತಿಳಿದಿಲ್ಲ. ರಾತೋ ರಾತ್ರಿ 22 ಖಾಸಗಿ ವಿವಿಗಳಿಗೆ ಅನುಮತಿಯನ್ನು ನೀಡಿದ್ದಾರೆ. ಇದರ ಉದ್ದೇಶ ಕೇವಲ ಹಣ ಮಾಡುವುದಾಗಿದೆ ಎಂದ ಅವರು ಶಿಕ್ಷಣ ಸಚಿವ 'ಸಿಟಿ'ರವಿ ಅಲ್ಲ ಇವರು 'ಲೂಟಿ' ರವಿ ಎಂದು ಛೇಡಿಸಿದರು.
ಸರ್ಕಾರ ತನ್ನ ವಿವಿಗಳ ಗುಣಮಟ್ಟದ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲ. ಹಣಕಾಸು ನೀಡುತ್ತಿಲ್ಲ, ಖಾಲಿ ಹುದ್ದೆಗೆ ನೇಮಕಾತಿ ನಡೆಸುತ್ತಿಲ್ಲ. ಹೀಗೆ ನೂರೆಂಟು ಸಮಸೈಗಳಿಂದ ಸರ್ಕಾರಿ ವಿವಿಗಳು ನರಳುತಿವೆ. ಅಂತಹದರಲ್ಲಿ 22 ಖಾಸಗಿ ವಿವಿಗಳಿಗೆ ಅನುಮತಿ ನೀಡಿದ್ದಾರೆ. ಇದು ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಘೋರ ಅಪರಾಧ ಎಂದು ತಿಳಿಸಿದರು. ವಿದ್ಯಾರ್ಥಿನಿ ಪ್ರಮೀಳಾ ಮಾತನಾಡಿ, ವ್ಯಾಪಕ ಪ್ರಮಾಣದಲ್ಲಿ ಖಾಸಗಿ ವಿವಿಗಳು ಪ್ರಾರಂಭಿಸಿರುವುದರಿಂದ ಈಗಿರುವ ಸರ್ಕಾರಿ ವಿವಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಡಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಸಾಧ್ಯವಿರದ ವಿವಿಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ್ ಜೈನ್, ವಿದ್ಯಾರ್ಥಿಗಳಾದ ಶಿಶಿರ್, ಸುಧಾರಾಣಿ, ರಾಜೇಶ್, ಪ್ರಮೀಳಾ ಇನ್ನಿತರರು ಪಾಲ್ಗೊಂಡಿದ್ದರು. ನಂತರದಲ್ಲಿ ಪ್ರಮುಖ ಬೇಡಿಕೆಗಳನ್ನು ಆಗ್ರಹಿಸಿದ ಮನವಿಯನ್ನು ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಪ್ರಮುಖ ಬೇಡಿಕೆಗಳು...
1. ಮೂಲಭೂತ ಸೌಲಭ್ಯಗಳಿಲ್ಲದ, ಅರ್ಹತೆಯಿಲ್ಲದ, ಶೈಕ್ಷಣಿಕ ಅನುಭವವಿಲ್ಲದ ಖಾಸಗಿ ವಿವಿಗಳ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಬಾರದು.
2. ಕರ್ನಾಟಕ ವಿವಿ ಕಾನೂನು-2000 ಕ್ಕೆ ತಿದ್ದುಪಡಿ ಮಾಡಿ ಸಿಂಡಿಕೇಟ್ಗಳಿಗೆ ಎಂ.ಎಲ್.ಎ ಮತ್ತು ಎಂ.ಎಲ್.ಸಿ ಗಳನ್ನು ನೇಮಿಸುವ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು.
3. ಲಂಚದ ಆರೋಪ ಹೊತ್ತಿರವ ರಾಜ್ಯಪಾಲರ ಮೇಲೆ ರಾಷ್ಟ್ರಪತಿಗಳಿಂದ ತನಿಖೆ ನಡೆಸಬೇಕು.
4. ಭ್ರಷ್ಟ ವಿಶ್ರಾಂತ ಕುಲಪತಿ ಮಹಿಳಾ ವಿವಿಯ ಡಾ. ಸಯೀದ್ ಅಖ್ತಾರ್, ಮೈಸೂರು ವಿವಿಯ ಡಾ. ಶಶಿಧರ ಪ್ರಸಾದ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಎ.ಎಸ್. ಪ್ರಭಾಕರನ್ ಹಾಗೂ ವಿ.ಟಿ.ಯು ನ ಈಗಿನ ಕುಲಪತಿ ಡಾ. ಮಹೇಶಪ್ಪ ಕುರಿತಾದ ತನಿಖಾ ವರದಿಗಳನ್ನು ಬಹಿರಂಗಪಡಿಸಬೇಕು ಹಾಗೂ ಕ್ರಮ ಜರುಗಿಸಬೇಕು.