ಜಾಗ ನೋಂದಣಿ ಸಮಸ್ಯೆ ಶೀಘ್ರ ಇತ್ಯರ್ಥ: ಭರವಸೆ
ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಗೃಹೋಪಯೋಗಿ ಪರಿವರ್ತಿತ ಭೂಮಿಯನ್ನು (ಕನ್ವರ್ಷನ್ ಭೂಮಿ) ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಹಲವು ಸಮಯಗಳಿಂದ ಜಿಲ್ಲಾಧಿಕಾರಿ ಸುತ್ತೋಲೆಯಂತೆ ನೊಂದಾವಣೆಯಾಗದೆ ಬಾಕಿ ಉಳಿದಿದೆ. ಇದರಿಂದ ಜನರಿಗೆ ಸಮಸ್ಯಯಾಗಿದ್ದನ್ನು ಕಂಡು ಸೋಮವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಿರುವುದಾಗಿ ಶಾಸಕ ಗೋಪಾಲ ಭಂಡಾರಿ ತಿಳಿಸಿದ್ದಾರೆ. ಸಮಸ್ಯೆ ಆಲಿಸಿದ ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶೀಘ್ರವಾಗಿ ತಾಲೂಕಿನ ಜಾಗದ ನೋಂದಣಿ ತೊಡಕು ನಿವಾರಣೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಭಂಡಾರಿ ಮಾಹಿತಿ ನೀಡಿದ್ದಾರೆ.
ಮಟ್ಕಾ ಅಡ್ಡಾಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಉಡುಪಿ: ಇಲ್ಲಿನ ನಗರದಾದ್ಯಂತ ವ್ಯಾಪಕವಾಗಿ ಬೀದಿ ಬೀದಿಗಳಲ್ಲಿ ಮಟ್ಕಾ ಅಡ್ಡಾಗಳು ತಲೆ ಎತ್ತಿದ್ದು ಯುವಕರು, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರು ತಮ್ಮ ದುಡಿದ ಹಣವನ್ನೆಲ್ಲ ಈ ಮೋಸದ ದಂಧೆಗೆ ಸುರಿದು ಸಂಸಾರವೇ ಬೀದಿಪಾಲಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತು ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಒತ್ತಾಯಿಸಿದೆ. ಕೇವಲ ಉಡುಪಿ ನಗರ ಮಾತ್ರವಲ್ಲದೆ, ಉಡುಪಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲೂ ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆಯಿಂದಾಗಿ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆ ಮತ್ತು ಮಕ್ಕಳು ಪ್ರತಿದಿನ ಕಣ್ಣೀರಿನಲ್ಲಿ ಮೂರು ಹೊತ್ತಿನ ಊಟಕ್ಕೂ ತತ್ತರವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪ್ರಮುಖ ರೂವಾರಿಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೌಡಿಗಳು ಬೆಂಗವಲಾಗಿ ನಿಂತಿದ್ದು, ಪೊಲೀಸ್ ಇಲಾಖೆ ನಿಷ್ಕ್ರೀಯವಾಗದೆ ತಕ್ಷಣ ಕ್ರಮಕೈಗೊಳ್ಳದಿದ್ದಲ್ಲಿ ಜೆಡಿಎಸ್ ಪಕ್ಷ ಬೀದಿಗಿಳಿದು ಹೋರಾಟ ಅನಿವಾರ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮನವಿ ಮಾಡಿದರು.