ಸರ್ವಶಿಕ್ಷಣದಿಂದ ಭ್ರಷ್ಟಾಚಾರ ನಿರ್ನಾಮ
ಉಡುಪಿ: ಭ್ರಷ್ಟಾಚಾರ ಮುಕ್ತ ಸಮಾಜದ ರಚನೆಯಾಗಬೇಕಾದರೆ ಎಲ್ಲರಿಗೂ ಶಿಕ್ಷಣ ದೊರಕುವಂತಾಗಬೇಕು ಎಂದು ಬಳಕೆದಾರರ ವೇದಿಕೆ ಸಂಚಾಲಕ ಕೆ. ದಾಮೋದರ ಐತಾಳ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಗಣೇಶ್ ಟುಟೋರಿಯಲ್ನಲ್ಲಿ 'ಶೈಕ್ಷಣಿಕ ಕ್ರಾಂತಿ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ಎಲ್ಲರಿಗೂ ಶಿಕ್ಷಣದ ಅವಶ್ಯಕತೆ ಇದ್ದೇ ಇದೆ ಎಂದ ಅವರು ಗೋಪಾಲಕೃಷ್ಣ ಅವರು ಬರೆದಿರುವ ಈ ಗ್ರಂಥವು ಶಿಕ್ಷಣದಲ್ಲಿ ಮನೋವೈಜ್ಞಾನಿಕ ತತ್ವಗಳನ್ನು ಪ್ರತಿಪಾದಿಸುತ್ತದೆ ಎಂದು ನುಡಿದರು.
ವ್ಯಕ್ತಿತ್ವ ವಿಕಸನ ತರಬೇತುದಾರ, ಲೇಖಕ ಟಿ.ಆರ್. ಗೋಪಾಲಕೃಷ್ಣ, ಅವಿಭಜಿತ ದ.ಕ. ಜಿಲ್ಲಾ ಟುಟೋರಿಯಲ್ ಸಂಘದ ಉಪಾಧ್ಯಕ್ಷ ಶಂಕರನಾರಯಣ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಇದ್ದರು. ಶಿವಾನಿ ಶೆಟ್ಟಿ ಸ್ವಾಗತಿಸಿ, ಮೆಹ ನೈಕ್ ವಂದಿಸಿದರು.
ಪುರಸಭೆ ಖಾತೆಯಲ್ಲಿ ರು. 50 ಲಕ್ಷಕ್ಕೂ
ಮಿಕ್ಕಿ ಬಜೆಟ್ ಖೋತಾ: ಗಣೇಶ್
ಕುಂದಾಪುರ: ಕಳೆದ 5 ವರ್ಷಗಳ ಕಾಲ ಕುಂದಾಪುರ ಪುರಸಭೆಯಲ್ಲಿ ಆಡಳಿತ ನಡೆಸಿದ ಬಿಜೆಪಿ ಪಕ್ಷ ಅಧಿಕಾರದಿಂದ ಕೆಳಗಿಳಿಯುವ ಹೊತ್ತಿಗೆ ಪುರಸಭೆಯ ಖಾತೆಯಲ್ಲಿ ರು. 50 ಲಕ್ಷಕ್ಕೂ ಮಿಕ್ಕಿ ಬಜೆಟ್ ಖೋತಾ ಮಾಡಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್ ಹೇಳಿದರು.
ಕುಂದಾಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷಗಳ ಹಿಂದೆ ಕಾಂಗ್ರೆಸ್ ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವ ಸಂದರ್ಭದಲ್ಲಿ ರು. 1.16 ಕೋಟಿ ಖಾತೆಯಲ್ಲಿ ಉಳಿಸಿದ್ದರೆ ಇಂದು ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಕೊಡಲು ಪುರಸಭೆಯಲ್ಲಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಉಡುಪಿ- ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಚುನಾವಣೆಯೆ ಹಿನ್ನೆಲೆಯಲ್ಲಿ ಪುರಸಭೆಯ ಎಲ್ಲಾ 23 ವಾರ್ಡ್ಗಳಿಗೆ ಭೇಟಿ ನೀಡಲಾಗಿದ್ದು, ಮತದಾರರು ಕಾಂಗ್ರೆಸ್ ಕೈ ಹಿಡಿಯುವ ಭರವಸೆ ನೀಡಿದ್ದಾರೆ ಎಂದರು.
ಕಳೆದ 5 ವರ್ಷಗಳಲ್ಲಿ ಆದ ತಪ್ಪಿಗಾಗಿ ಕಾಂಗ್ರೆಸ್ ಹಾಗೂ ಸಿಪಿಎಂ ಹೊಂದಾಣಿಕೆಯ ಮೂಲಕ ಪರ್ಯಾಯ ಆಡಳಿತ ನೀಡಲು ಬಯಸಿದೆ. ಅದಕ್ಕಾಗಿಯೇ ಕಾಂಗ್ರೆಸ್ ಪ್ರಬಲವಾಗಿರುವ 17 ಕ್ಷೇತ್ರಗಳಲ್ಲಿ ಹಾಗೂ ಸಿಪಿಎಂ ಬಲವಿರುವಲ್ಲಿ ಆ ಪಕ್ಷದ ಅಭ್ಯರ್ಥಿಗಳನ್ನು ಹಾಕಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಿರಿಯಣ್ಣ ಇದ್ದರು.