ದ್ವಿಚಕ್ರ ವಾಹನದೊಂದಿಗೆ ಜಾರಿ ಸಾವು
ಉಡುಪಿ: ಉಡುಪಿ ವಿದ್ಯಾಂಗ ಉಪನಿರ್ದೇಶಕರ ಕಚೇರಿಯ ವಾಹನ ಚಾಲಕರಾಗಿದ್ದ ಮಹೇಶ ಪ್ರಸಾದ (39) ಅವರು ಮಂಗಳವಾರ ರಾತ್ರಿ ಉದ್ಯಾವರದ ಪಿತ್ರೋಡಿಯಲ್ಲಿ ದ್ವಿಚಕ್ರವಾಹನದೊಂದಿಗೆ ಜಾರಿಬಿದ್ದು ಮೃತಪಟ್ಟಿದ್ದಾರೆ. ಅವರು ಇತ್ತೀಚೆಗೆ ಕಟ್ಟಿದ ಸ್ವಂತ ಮನೆಯ ಹತ್ತಿರದಲ್ಲಿಯೇ ಈ ದುರಂತ ಸಂಭವಿಸಿದೆ. ಅವಿವಾಹಿತರಾಗಿದ್ದ ಇವರು ತನ್ನ ವಿಧವೆ ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ಉತ್ತಮ ನಡತೆಯಿಂದಾಗಿ ಕಚೇರಿಯ ಸಿಬ್ಬಂದಿಯೊಂದಿಗೆ ಹಾಗೂ ಎಲ್ಲ ವಾಹನ ಚಾಲಕರಿಗೆ ಅಚ್ಚುಮೆಚ್ಚಿನವರಾಗಿದ್ದರು. ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮೂರು ಬಹುಮಾನಗಳನ್ನು ಗಳಿಸಿದ್ದರು. ಇವರ ನಿಧನಕ್ಕಾಗಿ ಉಪನಿರ್ದೇಶಕರಾದ ಎಸ್. ನಾಗೇಂದ್ರ ಮಧ್ಯಸ್ಥ ಹಾಗೂ ಕಚೇರಿ ಸಹುದ್ಯೋಗಿಗಳು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಮದ್ಯ ಸಂಗ್ರಹ: 25 ಮಂದಿ ಬಂಧನ
ಉಡುಪಿ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹವನ್ನು ನಿಷೇಧಿಸಲಾಗಿದ್ದರೂ, ಉಡುಪಿ ಜಿಲ್ಲೆಯಲ್ಲಿ ಅಂತಹ ಘಟನೆಗಳು ನಡೆದಿದೆ. ಅಬಕಾರಿ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಒಟ್ಟು 44 ಅಕ್ರಮ ಮದ್ಯಸಂಗ್ರಹದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 25 ಆರೋಪಿಗಳನ್ನು ಬಂಧಿಸಲಾಗಿದೆ.
ಸಾರ್ವಜನಿಕರ ಮಾಹಿತಿಯ ಮೇರೆಗೆ ಒಟ್ಟು 65 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅವುಗಳಲ್ಲಿ ಮದ್ಯದಂಗಡಿಗಳಲ್ಲಿ ಪರವಾನಗಿ ಷರತ್ತು ಉಲ್ಲಂಘನೆ ನಡೆಸಿದ 30 ಮದ್ಯದಂಗಡಿಗಳ ಮೇಲೆ ಸಾಮಾನ್ಯ ಮೊಕದ್ದಮೆಗಳನ್ನು, ಅನಧಿಕೃತ ಸ್ಥಳದಲ್ಲಿ ಮದ್ಯ ಸೇವನೆಗೆ 11 ಮೊಕದ್ದಮೆಗೆಳನ್ನು ಹಾಗೂ 3 ಮದ್ಯ ಸಾಗಾಟದ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಲ್ಲದೇ 35.940 ಲೀಟರ್ ಅಕ್ರಮ ಮದ್ಯ, 11.880 ಲೀ. ಅಕ್ರಮ ಬೀಯರ್ (ಒಟ್ಟು ಮೌಲ್ಯ ರು. 17,000) ಹಾಗೂ ಅಕ್ರಮ ಮದ್ಯ ಸಾಗಾಟಕ್ಕೆ ಉಪಯೋಗಿಸಿದ 1 ಆಟೋ ರಿಕ್ಷಾ ಮತ್ತು 1 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿರುತ್ತದೆ ಉಡುಪಿ ಅಬಕಾರಿ ಇಲಾಖೆಯ ಉಪ ಆಯುಕ್ತ ಜಾರ್ಜ್ ಪಿಂಟೋ ತಿಳಿಸಿರುತ್ತಾರೆ.