ಆನೆಗುಡ್ಡೆ ದೇವಸ್ಥಾನದಿಂದ ಧನ ಸಹಾಯ
ಕುಂದಾಪುರ: ತಾಲೂಕಿನ ಆನೆಗಡ್ಡೆ ವಿನಾಯಕ ದೇವಸ್ಥಾನದ ವತಿಯಿಂದ ಗುಡಿಗೋಪುರಗಳ ದುರಸ್ತಿಗೆ ಹಾಗೂ ರೋಗಿಗಳ ಆರೈಕೆಗಾಗಿ ರು 20 ಲಕ್ಷ ಹಾಗೂ ನೀಲಾವರ ಗೋಶಾಲೆಗೆ 1 ಲಕ್ಷವನ್ನು ವಿತರಿಸಲಾಯಿತು. ಸಮಾರಂಭವನ್ನು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿ ದೇವಾಲಯದ ಕಾರ್ಯವನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹರಿಕೃಷ್ಣ ಪುನರೂರು, ರಾಜ್ಯದಲ್ಲಿ ನೂರಾರು ದೇವಾಲಯಗಳು ಒಂದು ಕೋಟಿಗಿಂತಲೂ ಹೆಚ್ಚಿನ ಆದಾಯಗಳಿಸುತ್ತಿದ್ದು, ಅವುಗಳೂ ಇಂಥ ಕಾರ್ಯ ಮಾಡಲಿ ಎಂದರು. ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಣ ಉಪಾಧ್ಯಾಯ ವಂದಿಸಿದರು.
ಪಡುಬಿದ್ರಿ- ಸಕಲೇಶಪುರ ರೈಲು ಮಾರ್ಗ ಸರ್ವೆಗೆ ಸಂಸದ ಆಸ್ಕರ್ಗೆ ಮನವಿ
ಕಾರ್ಕಳ: ಕೆಥೊಲಿಕ್ ಸಭಾ ಕಾರ್ಕಳ ವಲಯ ಕಾರ್ಯಕರ್ತರು ಬುಧವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿಯಾಗಿ ಪಡುಬಿದ್ರಿಯಿಂದ ಕಾರ್ಕಳ- ಬೆಳ್ತಂಗಡಿ- ಉಜಿರೆ- ಚಾರ್ಮಾಡಿ ಮುಖಾಂತರ ಹಾಸನ- ಸಕಲೇಶಪುರ ರೈಲಿಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗ ಯೋಜನೆಯ ಸರ್ವೇ ಕಲಸ ಪ್ರಾರಂಭವಾಗದಿರುವ ಬಗ್ಗೆ ಗಮನ ಸೆಳೆದರು. ಅಲ್ಲದೆ, ಕೊಯಂಬುತ್ತೂರಿನಿಂದ ತಂಜಾವೂರು ಮುಖಾಂತರ ಮೈಲಾದಾತುರೈಗೆ ಬೆಳಗ್ಗೆ 7ಕ್ಕೆ ಹೊರಡುವ ರೈಲು ನಂಬ್ರ 12084 ಜನಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ನಾಗಪಟ್ಟಣವರೆಗೆ ವಿಸ್ತರಿಸುವ ಬಗ್ಗೆ ಮನವಿ ಮಾಡಿದರು. ಕೆಥೋಲಿಕ್ ಸಭಾ ಕಾರ್ಯಕರ್ತರಾದ ಸೊಲೊಮನ್ ಆಲ್ವಾರಿಸ್, ಹೆನ್ರಿ ಸಾಂತ್ಮೇಯರ್, ಪುರಸಭಾ ಸದಸ್ಯ ವಿನ್ನಿಬೋಲ್ಡ್ ಮೆಂಡೊನ್ಸಾ, ಉದ್ಯಮಿ ಆವೆಲಿನ್ ಲೂಯಿಸ್, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಜೋರ್ಜ್ ಕ್ಯಾಸ್ತಲಿನೋ ನಕ್ರೆ, ಕಾರ್ಕಳ ಶಾಸಕ ಗೋಪಾಲ ಭಂಡಾರಿ ಇದ್ದರು.