ಉಡುಪಿ: ಬಡ ಪ್ರತಿಭಾವಂತ ವಿದ್ಯಾರ್ಥಿನಿ ಮನೆಗೆ ಸೋಲಾರ್ ಬೆಳಕಿನ ವ್ಯವಸ್ಥೆ
ಉಡುಪಿ: ಉತ್ತರ ಕರ್ನಾಟಕದಿಂದ ವಲಸೆ ಬಂದು ನಗರದ ಹೊರಭಾಗದ ಬೀಡಿನಗುಡ್ಡೆಯ ಜೋಪಡಿಯಲ್ಲಿ ವಾಸಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಪ್ರೇಮಾಳ ಮನೆಗೆ ವಿದ್ಯಾಪೋಷಕ್- ಯಕ್ಷಗಾನ ಕಲಾರಂಗದ ಸೋಲಾರ್ ಬೆಳಕಿನ ಯೋಜನೆಯನ್ನು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, ಉತ್ತರ ಕರ್ನಾಟಕದಿಂದ ಬಂದು ಎಲ್ಲ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ವಿದ್ಯಾರ್ಜನೆಗೈಯುತ್ತಿರುವ ಮಕ್ಕಳಿಗೆ ನೆರವು ನೀಡಬೇಕಿರುವುದು ಉಡುಪಿಯ ನಾಗರಿಕರ ಕರ್ತವ್ಯ. ಇಂತಹ ವಿಧಾಯಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ವಿದ್ಯಾಪೋಷಕ್ ಸಂಸ್ಥೆಯೊಂದಿಗೆ ಸಹಭಾಗಿತ್ವ ಇರುತ್ತದೆ ಎಂಬುದಾಗಿ ತಿಳಿಸಿದರು.
ಈ ಸಂದರ್ಭ ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಪುರುಷೋತ್ತಮ ಪಟೇಲ್, ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ಎಸ್.ವಿ. ಭಟ್, ಕೆ. ಗಣೇಶ್ ರಾವ್, ಎಂ. ಗಂಗಾಧರ ರಾವ್, ಕೋಶಾಧಿಕಾರಿ ಬಿ. ನಾರಾಯಣ, ಸದಸ್ಯರಾದ ವಿ.ಜಿ. ಶೆಟ್ಟಿ, ಗಣರಾಜ್ ಭಟ್, ಸೆಲ್ಕೋ ಸಂಸ್ಥೆ ಅಧಿಕಾರಿ ಗುರುಪ್ರಸಾದ್ ಶೆಟ್ಟಿ ಮತ್ತು ಸಂಸ್ಥೆಯ ಸದಸ್ಯರು ಇದ್ದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಇಂತಹ ಜೋಪಡಿಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಸಂಸ್ಥೆ ಮುಂದಿನ ದಿನಗಳಲ್ಲಿ ವಿಸ್ತೃತ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.