ಉಡುಪಿ ಜಿಲ್ಲೆಗೆ ಪ್ರತ್ಯೇಕ ಸ್ನಾತಕೋತ್ತರ ಅಧ್ಯಯನ ಕೇಂದ್ರ- ಜಾಗ ಪರಿಶೀಲನೆ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಉಡುಪಿ ಜಿಲ್ಲೆಗೊಂದು ಪ್ರತ್ಯೇಕ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಯಿಂದ ನೇಮಿಸಲ್ಪಟ್ಟಿರುವ ತಜ್ಞರ ತಂಡವು ಉಡುಪಿಯ ಉಪ್ಪೂರು ಮತ್ತು ಬೆಳಪು ಗ್ರಾಮಗಳಲ್ಲಿರುವ ಸರ್ಕಾರಿ ಭೂಮಿಯನ್ನು ಪರಿಶೀಲನೆ ನಡೆಸಿತು.
ಉಡುಪಿ ವಿಧಾನ ಸಭಾ ವ್ಯಾಪ್ತಿಯ ಉಪ್ಪೂರು ಈ ಕೇಂದ್ರವನ್ನು ಸ್ಥಾಪಿಸುವುದಕ್ಕೆ ಉಡುಪಿ ಶಾಸಕ ಕೆ. ರಘುಪತಿ ಭಟ್ಟರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ.
ಕಾಪು ವಿಧಾನ ಸಭಾ ಕ್ಷೇತ್ರದ ಬೆಳಪು ಗ್ರಾಮ ಪಂಚಾಯಿತಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಅಲ್ಲಿನ ಶಾಸಕ ಲಾಲಾಜಿ ಆರ್. ಮೆಂಡನ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.
ಎರಡೂ ಗ್ರಾಮಗಳಿಗೆ ಭೇಟಿ ನೀಡಿದ ನಂತರ, ಸಮಿತಿಯ ಅಧ್ಯಕ್ಷ ಪ್ರೊ.ಕೆ.ಕೆ. ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ನಿಗದಿ ಪಡಿಸಿದ ಉಪ್ಪೂರು ಮತ್ತು ಬೆಳಪು ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆರಂಭಿಕ ಹಂತವಾಗಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ 20ರಿಂದ 25 ಎಕ್ರೆ ಭೂಮಿ ಬೇಕು. ಎರಡೂ ಗ್ರಾಮಗಳಲ್ಲಿ ಇಷ್ಟು ಭೂಮಿ ಲಭ್ಯ ಇದೆ. ಈ ಬಗ್ಗೆ ಸಮಿತಿ ಸಭೆ ಕರೆದು ಅಮೂಲಾಗ್ರವಾಗಿ ಚರ್ಚಿಸಿ ಸೂಕ್ತ ಕಂಡ ಜಾಗದ ಬಗ್ಗೆ ವಿವಿಗೆ ವರದಿ ಸಲ್ಲಿಸಲಾಗುವುದು. ಬಳಿಕ ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಅಂಗೀಕಾರಕ್ಕಾಗಿ ವರದಿ ಕಳುಹಿಸಲಾಗುವುದು ಎಂದರು.
ಉಪ್ಪೂರಿನಲ್ಲಿ ಶಾಸಕ ಕೆ. ರಘುಪತಿ ಭಟ್, ಬೆಳಪುನಲ್ಲಿ ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಭೂಮಿ, ಕೇಂದ್ರ ಸ್ಥಾಪನೆಗೆ ಸೌಲಭ್ಯ ಇತ್ಯಾದಿ ಬಗ್ಗೆ ತಂಡಕ್ಕೆ ಮಾಹಿತಿನೀಡಿದರು. ತಂಡದಲ್ಲಿ ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಪಿ.ಎಸ್. ಯಡಪಡಿತ್ತಾಯ, ಹಣಕಾಸು ಅಧಿಕಾರಿ ಪ್ರೊ.ಪಿ. ಫಕೀರಪ್ಪ, ಸಮಿತಿಯ ಸದಸ್ಯರಾದ ಪ್ರೊ.ಪಿ. ಶ್ರೀಪತಿ ತಂತ್ರಿ, ಪ್ರೊ. ಜೋಗನ್ ಶಂಕರ್, ಪ್ರೊ. ಮಂಜುನಾಥ ಪಟ್ಟಾಬಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.