ಹೆಬ್ರಿ ಮೆಸ್ಕಾಂ ಉಪವಿಭಾಗ ಸೇರ್ಪಡೆಗೆ ಭಾರಿ ವಿರೋಧ
ಹೆಬ್ರಿ: ಕಾರ್ಕಳ ತಾಲೂಕಿನ ಅಜೆಕಾರು ವ್ಯಾಪ್ತಿಯ ಅಜೆಕಾರು, ಹಿರ್ಗಾನ, ಕಡ್ತಲ ಮತ್ತು ಶಿರ್ಲಾಲು ಗ್ರಾಮಗಳನ್ನು ಕಾರ್ಕಳ ಮೆಸ್ಕಾಂ ವ್ಯಾಪ್ತಿಯಿಂದ ಪ್ರತ್ಯೇಕಿಸಿ ನೂತನ ಹೆಬ್ರಿ ಮೆಸ್ಕಾಂ ಸಬ್ ಡಿವಿಜನ್ ವ್ಯಾಪ್ತಿಗೆ ಸೇರಿಸುವುದಕ್ಕೆ ಭಾರಿ ವಿರೋಧ ಕೇಳಿ ಬಂದಿದೆ.
ಇತ್ತೀಚೆಗೆ ಅಜೆಕಾರಿನ ರಾಮಮಂದಿರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವಿರೋಧ ವ್ಯಕ್ತ ಪಡಿಸುವ ತಿರ್ಮಾನ ಕೈಗೊಳ್ಳಲಾಗಿದೆ.
ಹೆಬ್ರಿ ಸೇರ್ಪಡೆಯಿಂದ ಇಲ್ಲಿನ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ನವೀನ ಚಂದ್ರ ಜೈನ್, ತಾಲೂಕು ಕಾರ್ಯದರ್ಶಿ ಗೋವಿಂದರಾಜ ಭಟ್, ಮರ್ಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಹೆಗ್ಡೆ ಮುಂತಾದವರು ಇದ್ದರು.
ಹೆಬ್ರಿ ಮೆಸ್ಕಾಂ ವ್ಯಾಪ್ತಿಗೆ ಸೇರಿಸಲ್ಲ: ಹಿರ್ಗಾನ ಸೇರಿದಂತೆ ಅಜೆಕಾರು ಪರಿಸರದ ಯಾವುದೇ ಗ್ರಾಮಗಳನ್ನು ಜನತೆಗೆ ತೊಂದರೆಯಾಗುವಂತೆ ಹೆಬ್ರಿ ಮೆಸ್ಕಾಂ ಸಬ್ ಡಿವಿಜನ್ ವ್ಯಾಪ್ತಿಗೆ ಸೇರಿಸದಂತೆ ಈಗಾಗಲೇ ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ಮತ್ತು ಮೆಸ್ಕಾಂ ಉನ್ನತಾಧಿಕಾರಿಗಳೊಂದಿಗೆ ಸಮಾಲೋಚಿಸಿದ್ದು, ಅಗತ್ಯ ಮನವಿ ಮಾಡಿಕೊಳ್ಳಲಾಗಿದೆ. ಜನತೆಗೆ ತೊಂದರೆಯಾಗುವ ಯಾವುದೇ ತಿರ್ಮಾನಕ್ಕೆ ಅವಕಾಶ ನೀಡುವುದಿಲ್ಲ. ಜನರೊಂದಿಗೆ ತಾನೂ ಇರುವುದಾಗಿ ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ ತಿಳಿಸಿದ್ದು, ಜನತೆ ಅನಗತ್ಯ ದಾರಿತಪ್ಪಿಸುವ ವಿಚಾರ, ಗೊಂದಲಗಳಿಗೆ ಕಿವಿಗೊಟ್ಟು ಭಯ ಪಡಬಾರದು ಎಂದು ಮನವಿ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.