ಭ್ರಷ್ಟಾಚಾರ ರಹಿತ ಆಡಳಿತ; ಕೈ ಪಾಳಯ ಪ್ರಮಾಣ ವಚನ
ಉಡುಪಿ: ಭ್ರಷ್ಟಾಚಾರ ಮಾಡುವುದಿಲ್ಲ, ಕಮಿಷನ್ ತೆಗೆದುಕೊಳ್ಳುವುದಿಲ್ಲ, ತೆರಿಗೆ ಹೆಚ್ಚಿಸುವುದಿಲ್ಲ... ಎಂದು ದ.ಕ. ಜಿಲ್ಲೆಯ ನಗರಾಡಳಿತ ಸಂಸ್ಥೆಗಳಿಗೆ ಚುನಾಯಿತರಾದ ಕಾಂಗ್ರೆಸ್ ಸದಸ್ಯರಿಂದ ಕಟ್ಟುನಿಟ್ಟಿನ ಪ್ರಮಾಣ ಮಾಡಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ನೆಹರೂ ಮೈದಾನದಲ್ಲಿ ಮಾ.18ರಂದು ಸಾರ್ವಜನಿಕ ಸಮಾವೇಶವನ್ನು ಆಯೋಜಿಸಿ, ಸಾರ್ವಜನಿಕರ ಮುಂದೆ ಈ ಸದಸ್ಯರು ಭ್ರಷ್ಟಚಾರರಹಿತ ಪ್ರಾಮಾಣಿಕ ಆಡಳಿತ ನೀಡುವ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿ ತೆರಿಗೆಯನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಿಸಲಾಗಿದೆ. 5- 10 ಸೆಂಟ್ಸ್ ಭೂಮಿ ಇರುವ ಬಡವರು ಮನೆ ಕಟ್ಟುವ ಪರಿಸ್ಥಿತಿ ಮಂಗಳೂರಿನಲ್ಲಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ ಎಂದ ಅವರು ಈ ಪರಿಸ್ಥಿತಿಯನ್ನು ಸರಿಪಡಿಸುವುದಕ್ಕಾಗಿ ಕಾಂಗ್ರೆಸ್ ಸದಸ್ಯರಿಂದ ಈ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.
ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಗೆ ನೂರಾರು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಲ್ಲಿ ಕೆಲವೇ ಮಂದಿಗೆ ಮಾತ್ರ ಟಿಕೇಟು ಸಿಗಲಿದೆ. ಆದ್ದರಿಂದ ಉಳಿದ ಆಕಾಂಕ್ಷಿಗಳು ತಮ್ಮ ಅಸಮಾಧಾನವನ್ನು ಬಿಟ್ಟು ಟಿಕೆಟ್ ಸಿಕ್ಕಿದವರ ಪರ ಕೆಲಸ ಮಾಡಿ ಕಾಂಗ್ರೆಸ್ ಗೆಲ್ಲಿಸಬೇಕು. ಹಾಗೆಂದು ಎಲ್ಲಾ ಆಕಾಂಕ್ಷಿಗಳಿಂದಲೂ ಮಾ. 18ರಂದು ಪ್ರಮಾಣ ಮಾಡಿಸಲಾಗುವುದು ಎಂದು ಪೂಜಾರಿ ಹೇಳಿದರು.
ಉಡುಪಿ ಮತ್ತು ಇತರ ಕಡೆಗಳಲ್ಲಿಯೂ ಇಂತಹದ್ದೇ ಪ್ರಮಾಣವಚನವನ್ನು ಸ್ವೀಕರಿಸಿದರೆ ಒಳ್ಳೆಯದು ಎಂದವರು ಈ ಸಂದರ್ಭದಲ್ಲಿ ಸಲಹೆಯನ್ನೂ ಮಾಡಿದರು.