ಸಂಸ್ಕೃತಿಗೆ ಯಕ್ಷಗಾನದ ಕೊಡುಗೆ ಅಪಾರ: ಕುಂಬ್ಳೆ ಸುಂದರ್ ರಾವ್
ಶಿರ್ವ: ಟಿವಿ ಎಂಬ ಮೂರ್ಖರ ಪೆಟ್ಟಿಗೆ ಬಂದ ಪರಿಣಾಮ ಕಲೆ, ಸಾಹಿತ್ಯ, ಸಂಸ್ಕೃತಿ ನಾಶವಾಗುತಿದೆ. ಆದ್ದರಿಂದ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಿತ್ಯ ಸಾಗಬೇಕಾಗಿದೆ. ನಮ್ಮ ಮಕ್ಕಳಲ್ಲಿ ಕಲೆ ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವ ಮೂಲಕ ಯಕ್ಷಗಾನದಂತಹ ಕಲೆ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಕಲೆ ಸಂಸ್ಕೃತಿಯ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ ಎಂದು ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಅಭಿಪ್ರಾಯಪಟ್ಟರು.
ಸೂಡ ಶ್ರೀಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ವತಿಯಿಂದ ನಡೆದ ಯಕ್ಷಗಾನ ಅಧ್ಯಯನ ಹಾಗೂ ತರಬೇತಿ ಕೇಂದ್ರವನ್ನು ಮತ್ತು ತುಳು ಯಕ್ಷಗಾನ ಕುದಿ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅದ್ಯಕ್ಷತೆ ವಹಿಸಿದ ಕಾರ್ಕಳ ಕ್ಷೇತ್ರ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿ, ಬರಿ ಶೈಕ್ಷಣಿಕ ಪ್ರಗತಿಯಿಂದ ಏನನ್ನೂ ಸಾಧಿಸಲು ಸಾದ್ಯವಿಲ್ಲ. ಜೊತೆಗೆ ಕಲೆ ಸಾಹಿತ್ಯದ ಬಗೆಗೂ ನಮ್ಮಲ್ಲಿ ಒಲವೂ ನಿತ್ಯ ನಿರಂತರ ಇರಬೇಕು ಎಂದರು.
ಬಳಿಕ ಸುಮಾರು 28 ವರ್ಷಗಳ ಕಾಲ ಯಕ್ಷ ಕಲಾ ಭಾರತಿ ಸೂಡ ಸಂಸ್ಥೆಯನ್ನು ಪೋಷಿಸಿದ ಶಿರ್ವ ಕೋಡು ಕರುಣಾಕರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಪ್ರದೀಪ್ ಕುಮಾರ್ ಶೆಟ್ಟಿ ಕೋಡು ಶಿರ್ವ ರಚಿಸಿದ 'ಅಮರ್ ಬೊಲ್ಲಿ' ಕೃತಿಯನ್ನು ಉಪನ್ಯಾಸಕ ಭಾಸ್ಕರ್ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿದರು.
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 7 ಸಂಸ್ಥೆಗಳಿಗೆ ಸಮಗ್ರ ಯಕ್ಷಗಾನ ಸಾಧನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾಕರ್ ಜೋಷಿ, ಉದ್ಯಮಿ ನಂದಳಿಕೆ ಸುಹಾಸ್ ಹೆಗಡೆ, ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ ಕೆದಿಂಜೆ, ತಾ.ಪಂ. ಸದಸ್ಯ ಕ್ಸೇವಿಯರ್ ಡಿಮೆಲ್ಲೋ, ಯಕ್ಷಲೋಕ ನಂದಳಿಕೆಯ ನಿರ್ದೇಶಕ ನಂದಳಿಕೆ ಜನಾರ್ದನ ಶಾಸ್ತ್ರಿ, ಮನೋಹರ ಶೆಟ್ಟಿ, ಉದ್ಯಮಿ ಎಸ್. ಕೆ. ಸಾಲಿಯಾನ್, ಪ್ರಶಾಂತ್ ಶೆಟ್ಟಿ ಸೂಡ, ಅರ್ಚಕ ನಾರಾಯಣ ಭಟ್, ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲಾ ಹೆಗ್ಡೆ, ಶಿರ್ವ ಕೋಡುಋ ಕರುಣಾಕರ್ ಹೆಗ್ಡೆ, ರಿತೇಶ್ ಶೆಟ್ಟಿ ಸೂಡ, ಹರೀಶ್ ಶೆಟ್ಟಿ ಸೂಡ ಇದ್ದರು.