ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕುಂದಾಪುರ ತಾಲೂಕಿನಲ್ಲೇ ಗಂಗೊಳ್ಳಿ ಉಳಿಯಲಿ: ಗ್ರಾಮಸ್ಥರ ಆಗ್ರಹ

Lingaraj Badiger
Updated On : 16 Mar 2013, 11:38 am

ಗಂಗೊಳ್ಳಿ: ಚುನಾವಣಾ ದೃಷ್ಟಿಯಲ್ಲಿ ಗಂಗೊಳ್ಳಿಯು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದರೂ, ಗಂಗೊಳ್ಳಿಯನ್ನು ಯಾವುದೇ ಕಾರಣಕ್ಕೂ ನೂತನವಾಗಿ ರಚನೆಯಾಗಿರುವ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸಬಾರದು ಎಂದು ಗಂಗೊಳ್ಳಿ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗಂಗೊಳ್ಳಿ ಈ ಹಿಂದಿನಿಂದಲೂ ಕುಂದಾಪುರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಇಲ್ಲಿನ ಜನರು ಕುಂದಾಪುರವನ್ನೇ ನೆಚ್ಚಿಕೊಂಡಿದ್ದಾರೆ. ತಮ್ಮ ದೈನಂದಿನ ವ್ಯವಹಾರಗಳಿಗೆ ಹಾಗೂ ಇನ್ನಿತರ ತುರ್ತು ಅವಶ್ಯಕತೆಗಳಿಗಾಗಿ ಹತ್ತಿರದ ಕುಂದಾಪುರವನ್ನು ಅವಲಂಬಿಸಿದ್ದಾರೆ. ಬೈಂದೂರಿಗೆ ಹೋಲಿಸಿದರೆ ಗಂಗೊಳ್ಳಿ ಹಾಗೂ ಕುಂದಾಪುರ ನಡುವಣ ಬಸ್ ಸಂಚಾರ ಸಾಕಷ್ಟಿದ್ದು, ಪ್ರಯಾಣ ದರ ಕೂಡ ಅತಿ ಕಡಿಮೆಯಾಗಿದೆ. ಬೈಂದೂರಿಗಿಂತ ಕುಂದಾಪುರ ಹತ್ತಿರದಲ್ಲಿರುವುದರಿಂದ ಗಂಗೊಳ್ಳಿ ಜನರಿಗೆ ಕುಂದಾಪುರವೇ ಹೆಚ್ಚು ಅನುಕೂಲ. ಎಲ್ಲಾ ದೃಷ್ಟಿಯಲ್ಲಿ ಬೈಂದೂರಿಗಿಂತ ಕುಂದಾಪುರವೇ ಹೆಚ್ಚು ಪ್ರಶಸ್ತವಾಗಿರುವುದರಿಂದ ಗಂಗೊಳ್ಳಿಯನ್ನು ಯಾವುದೇ ಕಾರಣಕ್ಕೂ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸಬಾರದು ಎಂದು ಆಗ್ರಹಿಸಲಾಗಿದೆ. ಫೆ.19ರಂದು ನಡೆದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ದ್ವಿತೀಯ ಗ್ರಾಮಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ಫೆ.12ರಂದು ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗ್ರಾಮಸಭೆಯ ನಿರ್ಣಯವನ್ನು ಅನುಮೋದಿಸಿ, ಯಾವುದೇ ಕಾರಣಕ್ಕೂ ಗಂಗೊಳ್ಳಿಯನ್ನು ಬೈಂದೂರು ತಾಲೂಕಿಗೆ ಸೇರಿಸಬಾರದೆಂಬ ನಿರ್ಣಯವನ್ನು ಪಂಚಾಯಿತಿ ಕೈಗೊಂಡು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದೆ. ಈ ಸಂಬಂಧ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಕಂದಾಯ ಸಚಿವರು ಹಾಗೂ ಬೈಂದೂರು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಲು ನಿರ್ಧರಿಸಿರುವ ನಾಗರಿಕರು, ಗಂಗೊಳ್ಳಿಯನ್ನು ಬೈಂದೂರು ತಾಲೂಕಿಗೆ ಸೇರಿಸಲು ನಿರ್ಧರಿಸಿದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.  
ಗಂಗೊಳ್ಳಿಯನ್ನು ಬೈಂದೂರು ತಾಲೂಕಿಗೆ ಸೇರಿಸಬೇಕೆಂಬ ತಾಲೂಕು ಪುನ ವಿಂಗಡಣಾ ಸಮಿತಿಗಳ ಶಿಫಾರಸ್ಸಿಗೆ 2008ರಲ್ಲಿ ಗಂಗೊಳ್ಳಿ ಗ್ರಾ.ಪಂ. ತೀವ್ರ ವಿರೋಧ ವ್ಯಕ್ತಪಡಿಸಿ, ಗಂಗೊಳ್ಳಿ ನಾಗರಿಕರ ಅನುಕೂಲದ ದೃಷ್ಟಿಯಿಂದ ಗಂಗೊಳ್ಳಿಯನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಯಗೊಡಬೇಕೆಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement