ಡಾ.ಪಿ. ವೆಂಕಟ್ರಾಯ ಭಂಡಾರಿಗೆ ಸಂಯಮ ಪ್ರಶಸ್ತಿ ಪ್ರದಾನ
ಉಡುಪಿ: ಮದ್ಯಪಾನ ಎಂಬ ಸಮಸ್ಯೆಯನ್ನು ಪರಿಹಾರ ಮಾಡುವುದು ಸರ್ಕಾರದ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಇದಕ್ಕೆ ಜನ ಜಾಗೃತಿಯೊಂದೇ ಪರಿಹಾರ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಸಹಾಯಕತೆ ವ್ಯಕ್ತಪಡಿಸಿದರು.
ಶುಕ್ರವಾರ ಪುರಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ವತಿಯಿಂದ ಉಡುಪಿಯ ಖ್ಯಾತ ಮನೋವೈದ್ಯ ಡಾ.ಪಿ. ವೆಂಕಟ್ರಾಯ ಭಂಡಾರಿ ಅವರಿಗೆ ಸಂಯಮ ಪ್ರಶಸ್ತಿ - 2013 ಪ್ರದಾನ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ವಾರ್ಷಿಕ 16ರಿಂದ 17 ಸಾವಿರ ಕೋಟಿಗಳವರೆಗೆ ಆದಾಯವಿದೆ. ಆದರೆ, ಈ ಆದಾಯವೆಲ್ಲಾ ಮದ್ಯಪಾನದಿಂದ ಆಗುವ ಅನಾಹುತಗಳನ್ನು ತಡೆಗಟ್ಟುವುದಕ್ಕೆ ಗೃಹ ಇಲಾಖೆಯ ಮೂಲಕ ವ್ಯಯವಾಗುತ್ತದೆ. ಜೊತೆಗೆ ಇನ್ನೂ ಹತ್ತು ಸಾವಿರ ಕೋಟಿಗಳಷ್ಟು ಹೆಚ್ಚುವರಿ ಹಣ ಮದ್ಯಪಾನದಿಂದಾಗುವ ನಷ್ಟ ಪರಿಹಾರಕ್ಕೆ ಮೀಸಲಿಡಬೇಕಾಗುತ್ತದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಭಂಡಾರಿ ಅವರು, ಪ್ರಶಸ್ತಿಯೊಂದಿಗೆ ದೊರೆತ 1 ಲಕ್ಷವನ್ನು ತಾವು ಕೆಲಸ ಮಾಡುವ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡವರಿಗಾಗಿ ಮೀಸಲಿಡುವುದಾಗಿ ಘೋಷಿಸಿದರು.