'ವಿಧಾನಸಭೆ ಚುನಾವಣೆ ಗೆದ್ದು ಪ್ರತೀಕಾರ ತೀರಿಸಿ'
-ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ
ಉಡುಪಿ: ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಹಿನಡೆಯಾಗಿದ್ದು, ಕಾರ್ಯಕರ್ತರೆಲ್ಲರೂ ಮತ್ತೆ ಕಾರ್ಯಪ್ರವೃತ್ತರಾಗಿ, ನಗರಾಡಳಿತ ಚುನಾವಣೆಯಲ್ಲಾದ ಸೋಲಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರತೀಕಾರ ಮಾಡಬೇಕು ಎಂದು ಉಡುಪಿ ಜಿಲ್ಲಾ ಚುನಾವಣೆಯ ಬಿಜೆಪಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಭಾನುವಾರ, ನಗರಾಡಳಿತ ಚುನಾವಣೆಯ ಫಲಿತಾಂಶದ ಆತ್ಮಾವಲೋಕನಾ ಸಭೆಯಲ್ಲಿ ಉಡುಪಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಕೆ. ರಘುಪತಿ ಭಟ್, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಧಾಕರ ಶೆಟ್ಟಿ, ಶ್ಯಾಮಲಾ ಕುಂದರ್, ಯಶಪಾಲ ಸುವರ್ಣ, ವಿಲಾಸ್ ನಾಯಕ್, ಕಿರಣ್ ಕುಮಾರ್, ಹೆರ್ಗ ದಿನಕರ ಶೆಟ್ಟಿ ವೇದಿಕೆಯಲ್ಲಿದ್ದರು.
ನಗರ ಬಿಜೆಪಿ ಅಧ್ಯಕ್ಷ ಮನೋಹರ ಕಲ್ಮಾಡಿ ಸ್ವಾಗತಿಸಿದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.
ಚುನಾವಣೆಗೆ ವ್ಯಾಪಕ ಖರ್ಚು: ರಘುಪತಿ ಭಟ್
ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಕಾಂಗ್ರೆಸ್ ರು. 7 ಕೋಟಿಗಳನು ಚುನಾವಣೆಗಾಗಿ ಖರ್ಚು ಮಾಡಿದೆ ಎಂದು ಉಡುಪಿ ನಗರಸಭಾ ಚುನಾವಣೆ ಉಸ್ತುವಾರಿ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದ್ದಾರೆ. ಆದರೆ ಕೇವಲ ಕಾಂಗ್ರೆಸ್ನ ಹಣದ ಪ್ರಭಾವದಿಂದ ಬಿಜೆಪಿ ಸೋತಿಲ್ಲ. ನಮ್ಮೊಳಗಿನ ವೈಮನಸ್ಸುಗಳು, ಪಕ್ಷದ ಸಂಘಟನೆಯ ವೈಫಲ್ಯವೂ ನಮ್ಮ ಸೋಲಿಗೆ ಕಾರಣ ಎಂದೂ ಶಾಸಕರು ತಮ್ಮ ಪಕ್ಷದ ನಾಯಕರ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆದ್ದರೆ ಖಂಡಿತವಾಗಿಯೂ ಅವರು ಬಿಜೆಪಿಯ ಮೇಲೆ ಸೇಡಿನ ರಾಜಕಾರಣ ಆರಂಭಿಸುತ್ತಾರೆ. ಇದನು ತಪ್ಪಿಸಬೇಕಾದರೆ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನು ಗೆಲ್ಲಿಸಬೇಕು ಎಂದವರು ಹೇಳಿದರು.