ಉಡುಪಿಗೆ ಮೋನೋ ರೈಲು 'ಕೈಚಳಕ': ಮತದಾರ ಪುಳಕ
ಉಡುಪಿ: ಮುಂದಿನ ಐದು ವರ್ಷಗಳೊಳಗೆ ಉಡುಪಿ ನಗರದ ದಕ್ಷಿಣಭಾಗದಲ್ಲಿರುವ ಕಿನ್ನಿಮೂಲ್ಕಿಯಿಂದ ಸುಮಾರು 6 ಕಿ.ಮೀ.ನಷ್ಟು ದೂರ ಇರುವ ಮಣಿಪಾಲದವರೆಗೆ ಮೋನೊ ರೈಲು ಓಡಾಟ ಆರಂಭಿಸಲಿದೆ...!
ಇದು, ಉಡುಪಿ ನಗರಸಭೆಯಲ್ಲಿ ಸದ್ಯದಲ್ಲಿಯೇ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಕಾಂಗ್ರೆಸ್ ಚುನಾವಣೆಗೆ ಮೊದಲು ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಅತ್ಯಾಕರ್ಷಕ ಭರವಸೆ.
ಐದು ವರ್ಷ ಕಾಲಾವಕಾಶವಿದೆ: ನೆಲದಿಂದ ಅಷ್ಟೆತ್ತರದಲ್ಲಿ ಸಿಂಗಲ್ ಸ್ತಂಭಗಳ ಮೇಲೆ ಓಡುತ್ತವೆ ಈ ಮೋನೊ ರೈಲು. ಇಂತಹ ಒಂದು ಯೋಜನೆ ಜಾರಿಗೊಳಿಸುವುದು ಉಡುಪಿ ನಗರಸಭೆಯಿಂದ ಸಾಧ್ಯವೇ? ಉಡುಪಿ ನಗರಕ್ಕೆ ಇಂತಹ ಯೋಜನೆ ಅಗತ್ಯವೇ? ಕೋಟ್ಯಾಂತರ ರು. ವೆಚ್ಚದ ಯೋಜನೆಗೆ ಹಣಕಾಸಿನ ವ್ಯವಸ್ಥೆ ಹೇಗೆ? ಕಾಂಗ್ರೆಸ್ ನಿಜವಾಗಿಯೂ ರೈಲು ಓಡಿಸುತ್ತದೆಯೇ, ಅಥವಾ ಚುನಾವಣೆಗೆ ಮೊದಲು ಕಾಂಗ್ರೆಸ್ ರೈಲು ಬಿಡುತ್ತಿದೆಯೇ...? ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಲು 5 ವರ್ಷ ಕಾಯಬೇಕಾಗಿದೆ.
ಅನಿಲ ಕೊಳವೆ ಮಾರ್ಗ ಪಥ ಬದಲು: ಈ ಪ್ರಣಾಳಿಕೆಯಲ್ಲಿರುವ ಇನ್ನೊಂದು ಇಂತಹದ್ದೇ ಭರವಸೆ- ಕೇಂದ್ರ ಸರ್ಕಾರ ಘೋಷಿಸಿರುವ 350 ಕಿ.ಮೀ. ಉದ್ದದ ಚಿತ್ರದುರ್ಗ-ಮಂಗಳೂರು ಗ್ಯಾಸ್ ಪೈಪ್ ಲೈನನ್ನು ಉಡುಪಿಗೆ ತಿರುಗಿಸುವುದು!
ಈ ಪೈಪ್ ಲೈನ್ ಮೂಲಕ ಉಡುಪಿ ನಗರದ ಮನೆಮನೆಗೂ ಬಹಳ ಕಡಿಮೆ ಖರ್ಚಿನಲ್ಲಿ ಅಡುಗೆ ಅನಿಲ ಪೂರೈಸುವುದು, ಜೊತೆಗೆ ವಾಹನಗಳಿಗೆ ಮಾತ್ರವಲ,್ಲ ಮೀನುಗಾರಿಕಾ ಬೋಟುಗಳಿಗೂ ಕಡಿಮೆ ವೆಚ್ಚದಲ್ಲಿ ಅನಿಲ ಇಂಧನ ಪೂರೈಸುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಯಾಗಿದೆ.
ಎಲ್ಲ ಪಕ್ಷದ ಪ್ರಣಾಳಿಕೆಯಲ್ಲಿರುವಂತೆ ನಿರಂತರ ನೀರು, ರಸ್ತೆ, ಒಳಚರಂಡಿ, ತೆರಿಗೆ ಪರಿಷ್ಕರಣೆ, ಘನತ್ಯಾಜ್ಯ ವಿಲೇವಾರಿ, 24 ಗಂಟೆ ಸಹಾಯವಾಣಿ, ಸುಂದರ-ಸ್ವಚ್ಛ ನಗರ, ಉದ್ಯಾನವನ, ಬೀದಿ ದೀಪ, ಶೌಚಾಲಯ... ಇತ್ಯಾದಿ ಪುಂಖಾನುಪುಂಖ ಭರವಸೆಗಳು ಕೂಡ ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ.
ವಾರ್ಡ್ ಸಮಿತಿ ರಚನೆ: ಇದರಲ್ಲಿರುವ ಇನ್ನೊಂದು ಜನಾಪೇಕ್ಷಿತ ಮತ್ತು ಜಾರಿಗೊಳ್ಳಲು ಸಾಧ್ಯವಿರುವ ಭರವಸೆ ಎಂದರೆ ನಗರದ ಪ್ರತಿಯೊಂದು ವಾರ್ಡಿನ ಅಭಿವೃದ್ಧಿಯ ಮೇಲ್ವಿಚಾರಣೆ ನಡೆಸಲು, ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಗರದ ಗಣ್ಯರ, ಅನುಭವಿಗಳ, ಮೇಧಾವಿಗಳ ವಾರ್ಡ್ ಸಮಿತಿ ರಚಿಸುವುದು.
ಕೇರಳದಲ್ಲಿ ಇಂತಹ ಸಮಿತಿಗಳಿದ್ದು ಅಲ್ಲಿ ಗಣನೀಯವಾಗಿ ಭ್ರಷ್ಟಾಚಾರ ಕಡಿಮೆಯಾಗಿದೆಯಂತೆ. ಭ್ರಷ್ಟಾಚಾರದ ಕೂಪವಾಗಿರುವ ಉಡುಪಿಯಲ್ಲಿಯೂ ಇಂತಹ ವಾರ್ಡ್ ಸಮಿತಿಗಳ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದೇ? ಅದನ್ನೂ ಕಾದು ನೋಡಬೇಕು.
ಪಾವತಿಗೆ ಗಣ್ಯರ ಸಹಿ: ಯಾವುದೇ ವಾರ್ಡ್‌ನಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಬೇಕಾದರೆ ಆಯಾ ವಾರ್ಡಿನ 10 ಗಣ್ಯರಿಂದ ಸಹಿ ಹಾಕಿಸಿಕೊಳ್ಳಬೇಕು ಎನ್ನುವುದು ಪ್ರಣಾಳಿಕೆಯ ಇನ್ನೊಂದು ಆಕರ್ಷಕ ಘೋಷಣೆ. ಇದು ಕೂಡ ಯಶಸ್ವಿಯಾದರೆ ಕಮಿಷನ್ ಕೊಟ್ಟು ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೂ ಮೂಗುದಾರ ಬೀಳಬಹುದು.
ಒಟ್ಟಿನಲ್ಲಿ ಕಾಂಗ್ರೆಸ್ ನಗರದ ಜನತೆಗೆ ಸುಪ್ಪತ್ತಿಗೆ ಆಸೆ ತೋರಿಸಿದೆ, ಐದು ವರ್ಷಗಳ ಕೊನೆಗೆ ಚಾಪೆಯಾದರೂ ನೀಡುತ್ತದೆಯೇ...? ಕಾದು ನೋಡಬೇಕಾಗಿದೆ.
-ಸುಭಾಶ್ಚಂದ್ರ ಎಸ್. ವಾಗ್ಳೆ