ಹೊರಟಿದ್ದು ತವರಿಗೆ, ತಲುಪಿದ್ದು ಬಾರದ ಲೋಕಕ್ಕೆ
ಕುಂದಾಪುರ: ಇಲ್ಲಿನ ಬಳ್ಕೂರು ಗ್ರಾಮದ ಬಾಲಮ್ಮನಿಲಯ ಎಂಬ ಹೆಸರಿನ ಈ ಮನೆಯ ಕಿರಿಯ ಮುದ್ದಿನ ಮಗ ದೂರದ ಗುರುತು ಪರಿಚಯ ಇಲ್ಲದ ಆಫ್ರಿಕಾದ ದೇಶವೊಂದರಲ್ಲಿ ತಾನು ಮಾಡಿರದ ತಪ್ಪಿದೆ ಗುಂಡೇಟು ತಿಂದು ಮೃತನಾಗಿದ್ದಾನೆ.
ಈ ದುಃಖ, ನೋವು ಒಂದೆಡೆಯಾದರೆ, ಆ ಮಗನ ಶವ ಈಗ ದೂರದ ದೇಶದ ಯಾವ ಮೂಲೆಯ ಯಾವ ಆಸ್ಪತ್ರೆಯಲ್ಲಿದೆಯೋ, ಶವಾಗಾರದಲ್ಲಿದೆಯೋ, ಅದನ್ನು ಭಾರತಕ್ಕೆ, ತವರೂರು ಬಳ್ಕೂರಿಗೆ ತರುವ ಬಗೆಯಾದರೂ ಹೇಗೆ? ಕೊನೆ ಪಕ್ಷ ಮಗನ ಮುಖವನ್ನಾದರೂ ನೋಡುವ ಭಾಗ್ಯ ತಮಗಿದೆಯೋ ಇಲ್ಲವೋ ಎನ್ನುವ ವ್ಯಕ್ತಪಡಿಸಲಾಗದ ಆತಂಕ ದುಗುಡ ಇನ್ನೊಂದೆಡೆ...
ಮಂಗಳವಾರ ಮಧ್ಯಾಹ್ನ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್(ಸಿಎಆರ್) ದೇಶದ ರಾಜಧಾನಿ ಬಂಗುಯಿಯ ವಿಮಾನ ನಿಲ್ದಾಣದ ಬಳಿ ವಾಹನವೊಂದರಲ್ಲಿ ತೆರಳುತ್ತಿದ್ದವರು ಸೆಲ್ಕಾ ಎಂಬ ಬಂಡುಕೋರರಿಬೇಕು ಎಂಬ ಭಾವಿಸಿದ ಫ್ರಾನ್ಸ್ ದೇಶದ ಸೈನಿಕರು ವಾಹನದ ಮೇಲೆ ಗುಂಡಿನ ಮಳೆಗೆದರು. ಆ ವಾಹನದಲ್ಲಿ ಇಬ್ಬರು ಭಾರತೀಯರಿದ್ದರು. ಅವರಿಬ್ಬರೂ ತೀವ್ರ ಗಾಯಗೊಂಡು ಮೃತರಾಗಿದ್ದಾರೆ. ಅವರಲ್ಲಿ ಒಬ್ಬರು ಲಕ್ನೋ ನಿವಾಸಿ ಕರಣ್, ಇನ್ನೊಬ್ಬರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳ್ಕೂರಿನ ನಿವಾಸಿ ಕೃಷ್ಣಯ್ಯ ಮೊಗವೀರ (36).
ಕೃಷ್ಣಯ್ಯ ಮೊಗವೀರ ಬಳ್ಕೂರಿನ ನಾರಾಯಣ ಮೊಗವೀರ- ಬಾಲಮ್ಮ ಮೊಗವೀರ ದಂಪತಿ ಕಿರಿಯ ಮಗ. ಅವರಿಗೆ 3 ಮಂದಿ ಅಣ್ಣಂದಿರು ಮತ್ತು ಒಬ್ಬ ಅಕ್ಕ ಇದ್ದಾರೆ. 4 ವರ್ಷದ ಹಿಂದೆ ಸುಮನಾ ಎಂಬವರ ಜತೆ ಮದುವೆಯಾಗಿ ಆದಿತ್ಯ ಎಂಬ ಮಗು ಕೂಡ ಇದೆ. ಬಿಕಾಂ ಪದವೀಧರ ಕೃಷ್ಣಯ್ಯ ಮುಂಬೈಯಲ್ಲಿ 2 ವರ್ಷ ಉದ್ಯೋಗ ಮಾಡಿ, 8 ವರ್ಷಗಳಿಂದ ಆಫ್ರಿಕಾದ ಸಿಎಆರ್ ದೇಶದ ಔಷಧಿ ಕಂಪೆನಿಯೊಂದರಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ನವೆಂಬರ್‌ನಲ್ಲಿ ಊರಿಗೆ ಬಂದು ಮನೆಯಲ್ಲಿ ಕೆಲದಿನಗಳನ್ನು ಸಂತಸದಿಂದ ಕಳೆದು ಹಿಂತಿರುಗಿದ್ದರು.
ತವರಿಗೆ ಹೊರಟವರು ಬಾರದ ಲೋಕಕ್ಕೆ: ಅಷ್ಟರಲ್ಲಿ ಸಿಎಆರ್ ದೇಶದಲ್ಲಿ ಸ್ಥಳೀಯ ಸೆಲ್ಕಾ ಬಂಡುಕೋರರು ಅಟ್ಟಹಾಸ ಆರಂಭಿಸಿದ್ದರು, ಅವರನ್ನು ನಿಯಂತ್ರಿಸಲು ಫ್ರಾನ್ಸ್ ದೇಶದ ಸೈನ್ಯವನ್ನು ಕರೆಸಲಾಗಿದೆ. ಹಲವಾರು ದಿನಗಳಿಂದ ಬಂಡಕೋರರು ಮತ್ತು ಸೈನಿಕರ ನಡುವಿನ ಕಾಳಗದಲ್ಲಿ ತಾವು ಸುರಕ್ಷಿತರಲ್ಲ ಎಂದು ಕೃಷ್ಣಯ್ಯ ತಮ್ಮ ಗೆಳೆಯರ ಬಳಿ ಪದೇಪದೇ ಹೇಳುತ್ತಿದ್ದರು. ಇಲ್ಲಿ ಇದ್ದು ಈ ಕಾಳಗದಲ್ಲಿ ಸಾಯುವುದಕ್ಕಿಂತ ಊರಿಗೆ ತೆರಳುವುದೇ ಲೇಸು ಎಂದು ಕೃಷ್ಣಯ್ಯ ಮಂಗಳವಾರ ಭಾರತಕ್ಕೆ ಹೊರಟಿದ್ದರು. ಅದಕ್ಕಾಗಿ ವಾಹನವೊಂದರಲ್ಲಿ ಬಂಗುಯಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು, ಆದರೆ ಅವರ ಸಾವು ಅಲ್ಲಿಯೇ ಬರೆದಿತ್ತು, ಅವರಿದ್ದ ವಾಹನವನ್ನು ಬಂಡುಕೋರರ ವಾಹನ ಎಂದು ತಪ್ಪಾಗಿ ತಿಳಿದ ಫ್ರಾನ್ಸ್ ಸೈನ್ಯ ಗುಂಡು ಹಾರಿಸಿದೆ. ಈ ಗುಂಡಿನ ದಾಳಿಗೆ ವಾಹನದಲ್ಲಿದ್ದ 8 ಮಂದಿಯ ಪೈಕಿ ಭಾರತೀಯರಾದ ಕೃಷ್ಣಯ್ಯ ಮತ್ತು ಕರಣ್ ಬಲಿಯಾಗಿದ್ದಾರೆ.
ಮನೆಯಲ್ಲಿ ಸ್ಮಶಾನ ಮೌನ: ಇತ್ತ ಕುಂದಾಪುರದ ಬಳ್ಕೂರಿನ ಮನೆಯಲ್ಲಿ ತಮ್ಮ ಮಗನ ಆಗಮನಕ್ಕಾಗಿ ನಾರಾಯಣ- ಬಾಲಮ್ಮ ದಂಪತಿ ಸಂತಸದಿಂದ ತಯಾರಿ ನಡೆಸುತ್ತಿದ್ದರೆ ಬಂದಿದ್ದು ಮಗನ ಸಾವಿನ ಸುದ್ದಿ. ಕೃಷ್ಣಯ್ಯ ಮೊಗವೀರ ಅವರ ಪತ್ನಿ ಸುಮನ ಹಾಗೂ ಮಗು ಆದಿತ್ಯ ಮುಂಬೈನಲ್ಲಿ ನೆಲೆಸಿದ್ದು, ಸುದ್ದಿ ತಿಳಿದು ಕಂಗಾಲಾಗಿರುವ ಅವರು ಬುಧವಾರ ಊರಿಗೆ ಹೊರಟಿದ್ದಾರೆ.
ಸರ್ಕಾರಿ ಅಧಿಕಾರಿಗಳಿಂದ ಇದುವರೆಗೆ ಮನೆಗೆ ಯಾವುದೇ ಮಾಹಿತಿ, ಸಹಾಯದ ಭರವಸೆ ಬಂದಿಲ್ಲ. ಸಂಸದ ಜಯಪ್ರಕಾಶ ಹೆಗ್ಡೆ ಅವರು ತಕ್ಷಣ ಸ್ಪಂದಿಸಿದ್ದು, ಕೇಂದ್ರ ಸರ್ಕಾರದ ಸಹಾಯದಿಂದ ಕೃಷ್ಣಯ್ಯ ಅವರ ಶವವನ್ನು ಊರಿಗೆ ತರುವ ಭರವಸೆಯನ್ನು ನೀಡಿದ್ದಾರೆ ಎಂದು ನಾರಾಯಣ ಮೊಗವೀರ ಅವರ ಇನ್ನೊಬ್ಬ ಮಗ ಆನಂದ ಹೇಳಿದ್ದಾರೆ.