ಉಡುಪಿ ಜಿಲ್ಲಾದ್ಯಂತ 2,580 ಪೊಲೀಸ್ ಸಿಬ್ಬಂದಿ ನಿಯೋಜನೆ
ಉಡುಪಿ: ವಿಧಾನಸಭಾ ಚುನಾವಣೆ ಭಾನುವಾರ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 1038 ಮತಗಟ್ಟೆಗಳಿದೆ. ಅವುಗಳಲ್ಲಿ 52 ನಕ್ಸಲ್ ಪೀಡಿತ, 99 ಅತೀ ಸೂಕ್ಷ್ಮ, 515 ಸೂಕ್ಷ್ಮ ಮತ್ತು 372 ಇತರ ಸಾಮಾನ್ಯ ಮತಗಟ್ಟೆಗಳಿವೆ. ಮುಕ್ತ ಮತ್ತು ಶಾಂತಿಯುತ ಮತದಾನ ನಡೆಸುವುದಕ್ಕಾಗಿ ಈ ಮತಗಟ್ಟೆಗಳಲ್ಲಿ ಒಟ್ಟು 2580 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಈ ಬಂದೋಬಸ್ತಿನಲ್ಲಿ 114 ಪೊಲೀಸ್ ಅಧಿಕಾರಿಗಳು, 796 ಪೊಲೀಸ್ ಸಿಬ್ಬಂದಿ, 250 ಗೃಹರಕ್ಷಕ ದಳದ ಸಿಬ್ಬಂದಿ, 4 ರಾಜ್ಯ ಸಶಸ್ತ್ರ ಮೀಸಲು ಪಡೆ ಮತ್ತು 15 ಕೇಂದ್ರ ಅರೆಸೇನಾ ಪಡೆಗಳ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ.
ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಲ್ಲಿ ವಿಶೇಷವಾಗಿ ಅರೆಸೇನಾ ಪಡೆಯ ಸೈನಿಕರು ಪಹರೆ ಇರುತ್ತಾರೆ. ಜೊತೆಗೆ 3 ಅಥನಾ 4 ಚುನಾವಣಾ ಬೂತುಗಳಿರುವ ಮತಗಟ್ಟೆಗಳಲ್ಲಿಯೂ ಈ ಸೈನಿಕರು ಮತ್ತು ಜಿಲ್ಲೆಯ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ. ಉಳಿದ ಕಡೆಗಳಲ್ಲಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ.
ಹಣ ಸಾಗಾಟ ಇತ್ಯಾದಿ ಅಕ್ರಮಗಳನ್ನು ತಡೆಯಲು ಜಿಲ್ಲೆಯಲ್ಲಿ 15 ಚೆಕ್ಪೊಸ್ಟ್ಗಳನ್ನು ತೆರೆಯಲಾಗಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ಕಂದಾಯ, ಅಬಕಾರಿ, ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಚುನಾವಣಾ ನೀತಿ ಸಂಹಿತೆ ಜಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂಜಾಗರೂಕ ಕ್ರಮವಾಗಿ ಈಗಾಗಲೇ ಜಿಲ್ಲೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಸುಮಾರು 200ಕ್ಕೂ ಹೆಚ್ಚು ಮಂದಿಯನ್ನು ಆಯಾ ಪ್ರದೇಶದ ಠಾಣೆಗೆ ಕರೆಸಿ ಅವರಿಂದ ಮುಚ್ಚಳಿಕೆಯನ್ನೂ ಬರೆಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಬಂದೂಕು ಪರವಾನಿಗೆದಾರರಿಂದ ಬಂದೂಕುಗಳನ್ನು ಸಂಬಂಧಿತ ಠಾಣೆಯಲ್ಲಿ ಸಂಗ್ರಹಿಸಲಾಗಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಸಲು ಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಎಂ.ಬಿ. ತಿಳಿಸಿದ್ದಾರೆ.