ದೇವರ ಮೇಲೆ ಎಲ್ಲರ ಭಾರ!
ಕ.ಪ್ರ. ವಾರ್ತೆ ಉಡುಪಿ ಮೇ 6
ಚುನಾವಣೆಯೇನೋ ಮುಗಿದಿದೆ. ಬುಧವಾರ ಫಲಿತಾಂಶವೂ ತಿಳಿಯಲಿದೆ. ಆದರೆ ಉಡುಪಿ ಜಿಲ್ಲೆಯ ಯಾವ ಅಭ್ಯರ್ಥಿಯ ಮುಖದಲ್ಲಾಗಲಿ ಅಥವಾ ಮಾತಿನಲ್ಲಾಗಲಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳುವ ಧೈರ್ಯ ಮಾತ್ರ ಇಲ್ಲವಾಗಿದೆ.
ಆದರೂ ತಾವು ಹೋದಲೆಲ್ಲಾ ಜನರ ಪ್ರತಿಕ್ರಿಯೆ ನೋಡಿದರೆ ಗೆಲ್ಲುವ ಬಗ್ಗೆ ಪೂರ್ಣ ಭರವಸೆ ಇದೆ ಎನ್ನುವುದರೊಂದಿಗೆ ದೇವರ ಮೇಲೆ ಭಾರ ಹಾಕಲು ಮರೆಯುವುದಿಲ್ಲ.
ಭಾನುವಾರ ರಾತ್ರಿ ಸಾಕಷ್ಟು ತಡವಾಗಿಯೇ ಮಲಗಿದ್ದ ಬಹುತೇಕ ಅಭ್ಯರ್ಥಿಗಳಿಗೆ ಸೋಮವಾರ ಬೆಳಗಾಗಿದ್ದು ತುಸು ಲೇಟ್. 'ಮಳೆ ಮುಗಿದರೂ ಹನಿ ಮುಗಿಯುವುದಿಲ್ಲ' ಎನ್ನುವಂತೆ ಚುನಾವಣೆ ಮುಗಿದರೂ ಇವರಿಗೆ ಕಾರ್ಯಕರ್ತರೊಂದಿಗಿನ ಓಡಾಟ ಮುಗಿದಿರಲಿಲ್ಲ.
ಸೊರಕೆ ವಂದನಾರ್ಪಣೆ: ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಬೆಳಗ್ಗೆ 7 ಗಂಟೆಗೆ 'ಕನ್ನಡಪ್ರಭ' ಓದುತ್ತಾ ಕಾಫಿ ಕುಡಿದರು. ಅದಾಗಲೇ ಅವರ ಫೋನು ರಿಂಗು ಹೊಡೆಯುತ್ತಿತ್ತು. ನಂತರ ಕಾಪು ಕ್ಷೇತ್ರಕ್ಕೆ ತೆರಳಿ, ಅಲ್ಲಿ ರಾಜೀವ್ ಭವನದಲ್ಲಿ ಕಾಯುತ್ತಿದ್ದ ಒಂದಷ್ಟು ಕಾರ್ಯಕರ್ತರನ್ನು ಭೇಟಿಯಾಗಿ, ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟ ನಾಯಕರಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದರು. 'ಇನ್ನು ಮುಂದೆ ನಾನು ಗೆದ್ದು ಕಾಪು ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡುತ್ತೇನೆ' ಎಂದರು.
ಕಾರ್ಯಕರ್ತರೊಂದಿಗೆ ಮೆಂಡನ್: ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ಬೆಳಗ್ಗೆ ಇಡೀ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ವ್ಯಸ್ತರಾಗಿದ್ದರು, ಮೊಬೈಲ್ ಕಿವಿಗೇ ಅಂಟಿಕೊಂಡಿತ್ತು. ಮಧ್ಯಾಹ್ನ 12 ಗಂಟೆಗೆ ಒಂದಷ್ಟು ಕಾರ್ಯಕರ್ತರೊಂದಿಗೆ ಕೊಪ್ಪಲಂಗಡಿಯಲ್ಲಿ ನಡೆದ ಮುಸ್ಲಿಂ ಬಾಂಧವರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಯೇ ಊಟ ಮಾಡಿ, ಮನೆಗೆ ತೆರಳಿ ಒಂದಷ್ಟು ವಿಶ್ರಾಂತಿ ಪಡೆದು, ಸಂಜೆ ಕಚೇರಿಯಲ್ಲಿ ಕಾರ್ಯಕರ್ತರನ್ನು ಮತ್ತೆ ಭೇಟಿಯಾಗಿದ್ದರು.
ಪೂಜಾರಿ ಫುಲ್ ಬ್ಯುಸಿ: ಬೈಂದೂರಿನ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿಯಂತೂ ಮುಂಜಾನೆಯಿಂದಲೇ ಬ್ಯುಸಿಯೋ ಬ್ಯುಸಿ. ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 30 ಮದುವೆ ಮನೆಗಳಿಗೆ ಭೇಟಿ ನೀಡಿ ಮುಖ ತೋರಿಸಿ, 'ಹೋಗದಿದ್ದರೇ ಬೇಜಾರ್ ಮಾಡ್ಕೊಳ್ತಾರೆ ಮಾರಾಯ್ರೆ ಹ್ವಾಯ್' ಎನ್ನುತ್ತಾ ಮುಂದೆ ಸಾಗುತ್ತಿದ್ದರು. ಸಂಜೆ ಕಾರ್ಯಕರ್ತರನ್ನು ಭೇಟಿ ಮಾಡಿದರು.
ಶೆಟ್ರಿಂದ ದೇವಸ್ಥಾನ ಭೇಟಿ: ಉಡುಪಿಯ ಬಿಜೆಪಿ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಎಂದಿನಂತೆ ಬೆಳಗ್ಗೆ 6 ಗಂಟೆಗೆಲ್ಲಾ ತಮ್ಮ ಹೊಟೇಲಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಮೇಲೆ ಕಣ್ಣಾಡಿಸಿದ್ದಾರೆ.
ನಂತರ ತಮ್ಮ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಒಂದಷ್ಟು ಸಲಹೆ ಸೂಚನೆ ನೀಡಿದರು. ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಮಹಾಲಿಂಗೇಶ್ವರನ ಸೇವೆ ಮಾಡುತ್ತಿದ್ದೇನೆ, ಕ್ಷೇತ್ರದ ಮಹಾಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎನ್ನುವ ಆಶಯ ವ್ಯಕ್ತಪಡಿಸಿದರು.
ಸತೀಶ್ ಫುಲ್ ರೆಸ್ಟ್: ಇಲ್ಲಿನ ಜೆಡಿಎಸ್ ಅಭ್ಯರ್ಥಿ ಸತೀಶ್ ಪೂಜಾರಿ ಬಾರ್ಕೂರು ಅವರ ಮೇಲೆ ಎರಡು ದಿನಗಳ ಹಿಂದೆ ನಡೆದ ಹಲ್ಲೆಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ, ವಿಶ್ರಾಂತಿ ಪಡೆಯುತ್ತಿದ್ದಾರೆ.
ಮದುವೆ ಮನೆಗೆ ಗೋಪಾಲ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಎಚ್. ಗೋಪಾಲ ಭಂಡಾರಿ ಕಳೆದ ಕೆಲವು ದಿನಗಳಿಂದ ಮನೆ ಮನೆ ಸುತ್ತುತ್ತಿದ್ದರು. ಸೋಮವಾರ ಒಂದು ದಿನದಲ್ಲಿಯೇ 8 ಮದುವೆಗಳಿಗೆ ತೆರಳಿ ಶುಭ ಹಾರೈಸಿದರು. ಆಹವಾಲುಗಳೊಂದಿಗೆ ಕಾದಿದ್ದ ಸಾರ್ವಜನಿಕರನ್ನು ಮಾತನಾಡಿಸಿದರು.
-ಸುಭಾಶ್ಚಂದ್ರ ವಾಗ್ಳೆ