ಎಸ್ಸೆಸ್ಸೆಲ್ಸಿ ಪರೀಕ್ಷೆ: 125ಕ್ಕೆ 138 ಅಂಕ!
ಕ.ಪ್ರ.ವಾರ್ತೆ ಉಡುಪಿ ಮೇ 7
ಶಿಕ್ಷಣ ಇಲಾಖೆಯ, ಪರೀಕ್ಷಾ ಮಂಡಳಿಯ ತಪ್ಪುಗಳಿಗೆ ಕೊನೆ ಎಲ್ಲಿ? ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ 125 ಅಂಕಗಳಿಗೆ 138 ಅಂಕಗಳು ದೊರೆತಿವೆ!
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಗ್ಲೆನಿಟಾ ರೀಮಾ ಪಿಂಟೊ (ಗಿಲ್ಬರ್ಟ್ ಪಿಂಟೊ- ಆಗ್ನೇಸ್ ಪಿರೇರಾ ಅವರ ಪುತ್ರಿ) ಮತ್ತು ಶೀತಲ್ ಲೀಷಾ (ರೇಂಜಲ್ ಸ್ಟ್ಯಾನಿ, ರೇಂಜಲ್ ಲ್ಲೀನಾ ನಜ್ರೆತ್ ದಂಪತಿ ಪುತ್ರಿ) ಈ ಹೆಚ್ಚುವರಿ ಅಂಕಗಳನ್ನು ಪಡೆದವರು.
ಈ ವಿದ್ಯಾರ್ಥಿನಿಯರು ಸೋಮವಾರ ಅಂತರ್ಜಾಲದಲ್ಲಿ ತಮ್ಮ ಫಲಿತಾಂಶ ನೋಡಿದಾಗ 'ಫಲಿತಾಂಶವನ್ನು ತಡೆ ಹಿಡಿಯಲಾಗಿದೆ' ಎಂಬ ಸಂದೇಶ ಸಿಕ್ಕಿತ್ತು. ಕಾರಣ ಇರಲಿಲ್ಲ. ಈ ಸಂದೇಶ ನೋಡಿ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಆತಂಕಗೊಂಡಿದ್ದರು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೇ ಹೀಗಾಗೆದೆಯಲ್ಲ ಎಂದು ಆಶ್ಚರ್ಯವಾಗಿತ್ತು. ಆದರೆ, ಮಂಗಳವಾರ ಶಾಲೆಗೆ ಅಂಚೆ ಮೂಲಕ ಬಂದ ಫಲಿತಾಂಶದಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ತಡೆ ಹಿಡಿಯಲಾಗಿದ್ದ ಇಬ್ಬರ ಫಲಿತಾಂಶಗಳಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125 ಅಂಕಗಳಿಗೆ 138 ಅಂಕಗಳೆಂದು ಮುದ್ರಿತವಾಗಿವೆ.
ಪ್ರತಿಭಾನ್ವಿತ ವಿದ್ಯಾರ್ಥಿನಿ: ಗ್ಲೆನಿಟಾ ರೀಮಾ ಪಿಂಟೊಗೆ ಇಂಗ್ಲಿಷ್- 94, ಹಿಂದಿ- 99, ಗಣಿತ - 100, ವಿಜ್ಞಾನ- 96 ಮತ್ತು ಸಮಾಜ- 99 (ಒಟ್ಟು 5 ವಿಷಯಗಳಲ್ಲಿ 500ಕ್ಕೆ 488) ಅಂಕಗಳು ಲಭಿಸಿವೆ. ಈಕೆಗೆ ಕನ್ನಡದಲ್ಲಿ 125ಕ್ಕೆ 125 ಅಂಕ ಸಿಗುವ ವಿಶ್ವಾಸವಿತ್ತು. ಒಂದು ವೇಳೆ ಪರೀಕ್ಷಾ ಫಲಿತಾಂಶ ಸರಿಯಾಗಿ ಪ್ರಕಟವಾಗಿದ್ದರೆ, ಈಕೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಐವರು ವಿದ್ಯಾರ್ಥಿಗಳಲ್ಲಿ ಒಬ್ಬಳಾಗುತ್ತಿದ್ದಳು. ಶೀತಲ್ ಲ್ಲೀಷಾ ರೇಂಜಲ್ ಫಲಿತಾಂಶವೂ ಉತ್ತಮವಾಗಿಯೇ ಇದೆ. ಈಕೆಗೆ ಇಂಗ್ಲಿಷ್- 87, ಹಿಂದಿ-95, ಗಣಿತ- 82, ವಿಜ್ಞಾನ -74, ಸಮಾಜ- 94 ಅಂಕಗಳು ಬಂದಿವೆ. ಆದರೆ ಪರೀಕ್ಷಾ ಪಲಿತಾಂಶ ಪಟ್ಟಿಯಲ್ಲಿ ಒಟ್ಟು ಅಂಕಗಳ ಕಾಲಂ ಖಾಲಿ ಇದ್ದು, ಕೆಳಗೆ 'ಫಲಿತಾಂಶ ತಡೆ ಹಿಡಿಯಲಾಗಿದೆ' ಎಂದು ನಮೂದಿಸಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಬೆಂಗಳೂರು ಪರೀಕ್ಷಾ ಮಂಡಳಿಯನ್ನು ವಿಚಾರಿಸಿದಾಗ 'ಸ್ವಲ್ಪ ಕಾಯ್ರೀ, ಎಲ್ಲ ಸರಿ ಹೋಗುತ್ತೆ' ಎಂಬ ಸಿದ್ಧ ಉತ್ತರ ಬಂದಿದೆ. ಯಾವಾಗ ಸರಿಯಾಗುತ್ತೆ, ಅಲ್ಲಿವರೆಗೆ ವಿದ್ಯಾರ್ಥಿನಿಯರ ಮಾನಸಿಕ ಹಿಂಸೆಗೆ ಯಾರು ಹೊಣೆ?