ಅಭ್ಯರ್ಥಿಗಳು 46, ಮತ ಎಣಿಕಾ ಕೇಂದ್ರಕ್ಕೆ ಬಂದವರು 6 ಮಂದಿ..!
ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 46 ಅಭ್ಯರ್ಥಿಗಳ ಪೈಕಿ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ್ದು ಕೇವಲ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾತ್ರ. ಆಗಮಿಸಿದ್ದ ಅಭ್ಯರ್ಥಿಗಳಲ್ಲಿಯೂ ಕೆಲವರು ತಾವು ಗೆಲ್ಲುವುದು ಖಚಿತ ಎಂದು ಗೊತ್ತಾದ ಮೇಲೆ ಬಂದರು
ಮತ ಎಣಿಕೆ ಆರಂಭಕ್ಕೂ ಮೊದಲೇ ಕೇಂದ್ರಕ್ಕೆ ಬಂದವರು ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ್ಮಧ್ವರಾಜ್, ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಮತ್ತು ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಮಾತ್ರ. ಅವರು ತಾವು ಖಂಡಿತಾ ಗೆಲ್ಲುತ್ತೇವೆ ಎಂದು ಯೋಚಿಸಿದ್ದರು. ಆದರೆ ಲಾಲಾಜಿ ಯೋಚನೆ ಸುಳ್ಳಾಯಿತು, ಅವರು ಸೋತು ಮತಎಣಿಕಾ ಕೇಂದ್ರದಿಂದ ಹೊರ ನಡೆದರು.
ಅರ್ಧ ಮತ ಎಣಿಕೆ ನಡೆಯುತ್ತಿದ್ದಾಗ ಬಹುಶಃ ತಾವು ಮುನ್ನಡೆಯಲ್ಲಿದ್ದೇವೆ ಎಂಬ ಮಾಹಿತಿ ಪಡೆದು ಕೇಂದ್ರಕ್ಕೆ ಆಗಮಿಸಿದವರು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ, ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮತ್ತು ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ.
ಉಳಿದಂತೆ ಪ್ರಮುಖ ಅಭ್ಯರ್ಥಿಗಳಾದ ಉಡುಪಿಯ ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟಿ, ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ, ಕುಂದಾಪುರದ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ, ಬೈಂದೂರಿನ ಬಿಜೆಪಿ ಅಭ್ಯರ್ಥಿ ಸುಕುಮಾರ ಶೆಟ್ಟಿ ಎಣಿಕಾಕೇಂದ್ರಕ್ಕೆ ಬರಲೇ ಇಲ್ಲ.
ಪಕ್ಷೇತರ ಅಭ್ಯರ್ಥಿಗಳ ಪೈಕಿ ಭರ್ಜರಿ ಜಯ ಸಾಧಿಸಿದ ಕುಂದಾಪುರದ ಹಾಲಾಡಿ ಅವರನ್ನು ಬಿಟ್ಟರೇ, ಉಳಿದ ಪಕ್ಷೇತರ ಅಭ್ಯರ್ಥಿಗಳು ಮತ್ತು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಹುತೇಕರು ಎಣಿಕಾ ಕೇಂದ್ರದ ಬಳಿ ಸುಳಿಯುವ ಸಾಹಸಕ್ಕೂ ಕೈ ಹಾಕಲಿಲ್ಲ.
36 ಅಭ್ಯರ್ಥಿಗಳ ಠೇವಣಿ ಖೋತಾ...
ಜಿಲ್ಲೆಯಲ್ಲಿ ಕಣದಲ್ಲಿದ್ದ ಒಟ್ಟು 46 ಅಭ್ಯರ್ಥಿಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಇಬ್ಬರಂತೆ ಒಟ್ಟು 10 ಮಂದಿ (ಕಾಂಗ್ರೆಸ್ - 5, ಬಿಜೆಪಿ - 4, ಪಕ್ಷೇತರ - 1) ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 36 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಕಣದಲ್ಲಿದ್ದ 25 ಮಂದಿ ಪಕ್ಷೇತರ ಅಭ್ಯರ್ಥಿಗಳಲ್ಲಿ 24 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿಯ ಕುಂದಾಪುರದ 1 ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ. 5 ಬಾರಿ ಶಾಸಕರಾಗಿದ್ದ ವಸಂತ ಸಾಲ್ಯಾನ್ ಸೇರಿದಂತೆ ಜೆಡಿಎಸ್ ಪಕ್ಷದ 4, ಬಿಎಸ್ಪಿಯ 3, ಕೆಜೆಪಿಯ 2, ಜೆಡಿಯುನ 2, ಸಿಪಿಐಎಂನ 1 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.