ವಿಟ್ಲದಲ್ಲಿ ಚರಂಡಿ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ
ವಿಟ್ಲ: ಸರಿ ಸುಮಾರು ಒಂದು ವರ್ಷದಿಂದ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಅಂಗಡಿಗಳ ಎದುರು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೂ ಪಂಚಾಯಿತಿ, ಲೋಕೋಪಯೋಗಿ ಇಲಾಖೆಯನ್ನು ದೂರುತ್ತಾ ಕಾಲ ಹರಣ ಮಾಡುತ್ತಿರುವುದು ಅಂಗಡಿ ಮಾಲಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಂಚಾಯಿತಿ ಮಳೆಗಾಲದ ಪ್ರಾರಂಭದಲ್ಲಿ ತಾತ್ಕಾಲಿಕ ಪರಿಹಾರವಾಗಿ ರು. 1 ಲಕ್ಷ ವೆಚ್ಚದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಿದ್ದು, ನಂತರ ಮಳೆ ನೀರಿನ ಹರಿವಿನ ಜತೆಯಲ್ಲಿ ಬಂದ ಮಣ್ಣು ಚರಂಡಿಯಲ್ಲಿ ತುಂಬಿ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದೆ.
ಮುಖ್ಯವಾಗಿ ಚರಂಡಿಗೆ ಹೊಟೇಲ್ ಒಂದರ ನೀರು ಹರಿದು ಬರುತ್ತಿದ್ದು ಈ ಹಿನ್ನಲೆಯಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತದೆ.
ಇದೇ ಕಾರಣಕ್ಕೆ ಮತ್ತೆ ಒಂದು ಅಡಿ ಆಳದ ಚರಂಡಿಯನ್ನು ನಾಲ್ಕು ಅಂಗಡಿಗಳ ಮುಂದೆ ಮತ್ತೆ ಅಗೆದು ನಿರ್ಮಿಸಿದ ಪಂಚಾಯಿತಿ ಚರಂಡಿಗೆ ಯಾವುದೇ ಕಾಂಕ್ರೀಟೀಕರಣವಾಗಿಲ್ಲ. ಇದು ಮತ್ತೆ ಮುಚ್ಚುತ್ತಾ ಬಂದಿದ್ದು ಮುಂದೆ ಬರುವ ಮಳೆಗೆ ಮತ್ತೆ ಈ ಅಂಗಡಿಗಳ ಮುಂದೆ ಹೊಂಡ ನಿರ್ಮಿಸುವ ಬದಲು ಸಮರ್ಪಕವಾದ ಚರಂಡಿ ನಿರ್ಮಿಸಿ ನೀರು ಹರಿದು ಹೋಗುವಂತೆ ಮಾಡಬೇಕೆಂದು ಅಂಗಡಿ ಮಾಲಿಕರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲಿಸಿದ್ದಾರೆ.