18ರಂದು ದರ್ಪಣ್ 2013 ವಿಶಿಷ್ಟ ನೃತ್ಯ ಕಾರ್ಯಕ್ರಮ
ಉಡುಪಿ: ನಗರದ ಅತ್ಯಂತ ಜನಪ್ರಿಯ ನೃತ್ಯ ತಂಡವಾಗಿರುವ ಕಡಿಯಾಳಿಯ ಪ್ರಶಾಂತ್ ಎನ್ ಗ್ರೂಪ್ (ಪಿಎನ್‌ಜಿ) ಡ್ಯಾನ್ಸ್ ಅಕಾಡೆಮಿಯು 'ದರ್ಪಣ್ - 2013' ಎಂಬ ವಿಶಿಷ್ಟ ನೃತ್ಯ ಕಾರ್ಯಕ್ರಮವನ್ನು 18ರಂದು ಸಂಜೆ 6.30ಕ್ಕೆ ಮಲ್ಪೆ ಕಡಲ ತೀರದಲ್ಲಿ ಆಯೋಜಿಸಿದೆ. ಇದರಲ್ಲಿ ರಾಷ್ಟ್ರೀಯ ಮಟ್ಟದ ನೃತ್ಯ ತಂಡಗಳು ಭಾಗವಹಿಸಲಿವೆ.
ಸತತ 4ನೇ ವರ್ಷ ಈ ನೃತ್ಯ ವೈವಿಧ್ಯವನ್ನು ಅಕಾಡಮಿಯು ಪ್ರಸ್ತುತಪಡಿಸುತ್ತಿದ್ದು, ಈ ಬಾರಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯು ಸಹಭಾಗಿತ್ವ ವಹಿಸಿದೆ. ಅಕಾಡೆಮಿಯ ಸುಮಾರು 200 ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿ ಮುಂಬೈನ ಫಿಕ್ಟೀಶಿಯಸ್ ಗ್ರೂಪ್ ಈ ಬಾರಿ ಭಾಗವಹಿಸುತ್ತಿರುವುದು ದರ್ಪಣ್ - 2013ಕ್ಕೆ ವಿಶೇಷ ಮೆರುಗು ನೀಡಲಿದೆ. ಸುಮಾರು 25 ಸಾವಿರ ಮಂದಿ ಪ್ರೇಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸುವ ನಿರೀಕ್ಷೆಯಿದೆ. ಆಸಕ್ತರಿಗೆ ಮುಕ್ತಪ್ರವೇಶ.
ಅಕಾಡೆಮಿಯ ವಿದ್ಯಾರ್ಥಿಗಳೇ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್ ಸಹಿತ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
250ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿರುವ ಪಿ.ಎನ್.ಜಿ
ಅಕಾಡೆಮಿಯು 15 ವರ್ಷಗಳಲ್ಲಿ ಕರಾವಳಿಯಲ್ಲಿ ಶಿಸ್ತುಬದ್ಧವಾಗಿ ಅಧುನಿಕ ನೃತ್ಯ ತರಬೇತಿ ನೀಡುತ್ತಿದೆ. ಮುಂಬೈ, ಹೈದರಾಬಾದ್, ಜೈಪುರ, ಮೈಸೂರು, ಬೆಂಗಳೂರು, ಮಂಡ್ಯಗಳಲ್ಲಿ ಅಕಾಡಮಿಯ ನೃತ್ಯಪಟುಗಳು ಕಾರ್ಯಕ್ರಮ ನೀಡಿದ್ದಾರೆ. 250ಕ್ಕೂ ಅಧಿಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹಿಂದಿ, ಕನ್ನಡ ವಾಹಿನಿಗಳ ನಡೆಸುವ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಾ ಗಮನ ಸೆಳೆದಿದ್ದಾರೆ. ಸಂಸ್ಥೆಯ ಮುಖ್ಯ ನೃತ್ಯ ನಿರ್ದೇಶಕ ಪ್ರಶಾಂತ್ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದಾರೆ. ಫ್ರೀ ಸ್ಟೈಲ್, ಹಿಪ್‌ಹಾಪ್, ಬಾಲಿವುಡ್ ಮತ್ತು ಕಂಟೆಂಪರರಿ ನೃತ್ಯಗಳು ಅವರ ಪರಿಣತಿಯ ವೈಶಿಷ್ಟ್ಯಗಳಾಗಿವೆ.
--