ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ: 20ರಿಂದ ತಾಳಮದ್ದಳೆ ಸಪ್ತಾಹ

Lingaraj Badiger
Updated On : 16 May 2013, 12:09 pm

ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗವು ಪ್ರತಿವರ್ಷದಂತೆ ಈ ಬಾರಿ ಪರ್ಯಾಯ ಸೋದೆ ಮಠ ಮತ್ತು ಕರ್ಣಾಟಕ ಬ್ಯಾಂಕ್ ಆಶ್ರಯದಲ್ಲಿ 20ರಿಂದ 26ರವರೆಗೆ 'ತಾಳಮದ್ದಲೆ ಸಪ್ತಾಹ-2013'ನ್ನು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದೆ.
 ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಉದ್ಘಾಟನೆ: ಸಪ್ತಾಹವನ್ನು 20ರಂದು ಸಂಜೆ 5 ಗಂಟೆಗೆ ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥಸ್ವಾಮೀಜಿ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಉದ್ಯಮಿ ಅಗರಿ ರಾಘವೇಂದ್ರ ರಾವ್, ಮಲ್ಪೆ ಟೆಬ್ಮಾದ ಮುಖ್ಯ ಸಮುದಾಯ ಸಂಪರ್ಕಾಧಿಕಾರಿ ಪಿ. ರಾಮದಾಸ ಭಟ್, ಭಟ್ಕಳದ ವೈದ್ಯ ಡಾ. ಪಾಂಡುರಂಗ ನಾಯಕ್ ಭಾಗವಹಿಸಲಿದ್ದಾರೆ.
 26ರಂದು ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಅರ್ಥಧಾರಿ, ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಗೆ 'ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ' ಪ್ರದಾನ ಮಾಡಲಾಗುವುದು. ಪರ್ಯಾಯ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ. ಮಂಗಳೂರಿನ ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮಣಿಪಾಲದ ಉದ್ಯಮಿ ಬಿ. ಜಯರಾಜ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
 ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಮತ್ತು ಕೋಶಾಧಿಕಾರಿ ಬನ್ನಂಜೆ ನಾರಾಯಣ ಇದ್ದರು.

ಈ ಬಾರಿ ಕಾಳಗ ಸಪ್ತಾಹ...
ಪ್ರತಿವರ್ಷ ಈ ತಾಳಮದ್ದಲೆ ಸಪ್ತಾಹದಲ್ಲಿ ವಿಶಿಷ್ಟ ವಿಷಯ ಆಯ್ದುಕೊಳ್ಳಲಾಗುತ್ತದೆ. ಈ ಬಾರಿ 'ಕಾಳಗ' ಎಂಬ ವಿಷಯ ಆಯ್ದುಕೊಂಡು, ಸಪ್ತಾಹಕ್ಕೆ 'ಕಾಳಗ ಸಪ್ತಕ' ಎಂದು ಹೆಸರಿಸಲಾಗಿದೆ. 22ರಂದು ಕಡಂದಲೆ ರಾಮರಾವ್ ವಿರಚಿತ 'ಕಾರ್ತವೀರ್ಯಾರ್ಜುನ ಕಾಳಗ'ದೊಂದಿಗೆ ಸಪ್ತಾಹ ಆರಂಭ. ನಂತರ ಪ್ರತಿದಿನ ಅನುಕ್ರಮವಾಗಿ ಪಾರ್ತಿಸುಬ್ಬ ವಿರಚಿತ 'ಇಂದ್ರಜಿತು ಕಾಳಗ', ಎ.ಆರ್. ಶಗ್ರಿತ್ತಾಯ ವಿರಚಿತ 'ತರಣಿಸೇನ ಕಾಳಗ', ಕಡಂದಲೆ ರಾಮರಾವ್ ವಿರಚಿತ 'ರಾಮಾಂಜನೇಯ ಕಾಳಗ', ಪ್ರೊ. ಎಂ.ಎ. ಹೆಗಡೆ ವಿರಚಿತ 'ಲವಕುಶ ಕಾಳಗ', ದೇವಿದಾಸ ವಿರಚಿತ 'ಬಭ್ರುವಾಹನ ಕಾಳಗ' ಮತ್ತು ಕೊನೆಯ ದಿನ 26ರಂದು ಗೇರುಕಟ್ಟೆ ಶಾಂತಪ್ಪಯ್ಯ ವಿರಚಿತ 'ಕರ್ಣಾರ್ಜುನ ಕಾಳಗ' ನಡೆಯಲಿದೆ. ಸಪ್ತಾಹವನ್ನು ಕಲಾರಂಗದ ಜೊತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸಂಯೋಜಿಸಲಿದ್ದು, ಕೊನೆಯ ದಿನ ಎಲ್ಲಾ ತಾಳಮದ್ದಲೆಗಳ ಬಗ್ಗೆ ನಿಟ್ಟೂರು ಶಾಂತಾರಾಮ ಪ್ರಭು ಅವಲೋಕನ ಮಾಡಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಕುರಿತು...
ಕುಂದಾಪುರ ತಾಲೂಕಿನ 77ರ ಹರೆಯದ ಕಂದಾವರ ರಘುರಾಮ ಶೆಟ್ಟಿ ನಿವೃತ್ತ ಶಿಕ್ಷಕರು, ಅವರ ಸೇವೆಗೆ 'ಮಾದರಿ ಶಿಕ್ಷಕ' ಪ್ರಶಸ್ತಿ ಪಡೆದವರು. ಯಕ್ಷಗಾನದ ಜೊತೆಗೆ ನಾಟಕ ಇನ್ನಿತರ ಕಲಾಪ್ರಕಾರಗಳಲ್ಲಿಯೂ ಆಸಕ್ತಿ ಹೊಂದಿರುವ ಶೆಟ್ಟರು, ಯಕ್ಷಗಾನದಲ್ಲಿ ಹವ್ಯಾಸಿ ಕಲಾವಿದರಾಗಿ ಸಕ್ರಿಯರಾಗಿದ್ದವರು, ತಾಳಮದ್ದಲೆ ಅರ್ಥಧಾರಿಯಾಗಿ ಹಲವಾರು ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ಕಟ್ಟಿ ಕೊಟ್ಟವರು. ಪ್ರವಚನಕಾರರೂ ಆಗಿರುವ ಅವರು ಲೇಖಕರಾಗಿಯೂ ಸಾಕಷ್ಟು ಪ್ರಸಿದ್ಧರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರ ಹಲವಾರು ಕತೆ, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 29 ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವುದು ಅವರ ಸಾಧನೆ. ಅವುಗಳಲ್ಲಿ ಹಲವಾರು ಪ್ರಸಂಗಗಳು ಹತ್ತಾರು ವರ್ಷ ಕಳೆದ ಮೇಲೂ ಪ್ರಸದರ್ಶನಗೊಳ್ಳುತ್ತಿರುವುದು ಅವುಗಳ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement