ನಕ್ಸಲರ ಹೊಸ ಕಾರ್ಯತಂತ್ರ?
ಉಡುಪಿ: ಪ್ರತಿ ಬಾರಿ ಚುನಾವಣೆಯ ಸಂದರ್ಭದಲ್ಲಿ ಕರೆನಾಡು- ಮಲೆನಾಡು ಜಿಲ್ಲೆಗಳ ಪೊಲೀಸರ ದೊಡ್ಡ ತಲೆನೋವು ನಕ್ಸಲೀಯರು ಮತ್ತು ಅವರು ಚುನಾವಣಾ ಬಹಿಷ್ಕಾರದ ಕರೆಗಳು, ಆ ಬಗ್ಗೆ ಅವರು ಹಂಚುವ ಕರಪತ್ರಗಳು, ಹಚ್ಚುವ ಪೋಸ್ಟರುಗಳು...
ಆದರೆ, ಈ ಬಾರಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಈ ಪ್ರದೇಶದಲ್ಲಿ ನಕ್ಸಲೀಯರೇ ಇಲ್ಲವೇನೋ, ಇಲ್ಲಿಂದ ಕಾಲ್ಕಿತ್ತಿದ್ದಾರೇನೋ ಎಂಬಂತಿತ್ತು ಪರಿಸ್ಥಿತಿ. ಇದರಿಂದ ಮುಖ್ಯವಾಗಿ ಕರಾವಳಿಯ ಜಿಲ್ಲೆಗಳ ಪೊಲೀಸರು ದೊಡ್ಡ ತಲೆನೋವು ಕಳೆದುಕೊಂಡಿದ್ದರು.
ಆದರೆ, ಚುನಾವಣೆಗಳು ಮುಗಿದ ಸುಮಾರು 1ವಾರದಲ್ಲಿಯೇ ಚಿಕ್ಕಮಗಳೂರಿನ ಕೆರೆಕಟ್ಟೆ ಎಂಬಲ್ಲಿ ನಕ್ಸಲೀಯರು ಪೊಲೀಸರ ಮೇಲೆ ಗುಂಡು ಹಾರಿಸುವ ಮೂಲಕ, ತಾವಿನ್ನೂ ಇಲ್ಲೇ ಇದ್ದೇವೆ... ಹೋಗಿಲ್ಲ ಎಂಬುದನ್ನು ತೋರಿಸಿಕೊಟಿದ್ದು, ಸ್ವಲ ದಿನ ಸುಮ್ಮನಿದ್ದು ಹೊಸ ಕಾರ್ಯತಂತ್ರ ರೂಪಿಸುತ್ತಿರಬಹುದು.
ಕೆಲವು ತಿಂಗಳ ಹಿಂದೆ ದ.ಕ. ಜಿಲ್ಲೆಯ ಕಾಡಂಚಿನ ಗ್ರಾಮದಲ್ಲಿ ನಕ್ಸಲೀಯರ ಚಟುವಟಿಕೆಗಳು ಕಾಣಿಸಿಕೊಂಡಿದ್ದವು. ನಂತರ ಈ ಚಟುವಟಿಕೆಗಳು ಕೊಡಗು ಜಿಲ್ಲೆಗೆ ವರ್ಗಗೊಂಡಿದ್ದವು. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದೊಂದು ವರ್ಷದಿಂದ ಇಲ್ಲವೆನ್ನುವಷ್ಟು ನಕ್ಸಲೀಯ ಓಡಾಟ ಕಡಿಮೆಯಾಗಿತ್ತು.
ನಕ್ಸಲರ ಕರೆಗೆ ತಿರಸ್ಕಾರ: 2004ರ ನಂತರ ನಡೆದ ನಾಲ್ಕೈದು ಚುನಾವಣೆಯ ಸಂದರ್ಭದಲ್ಲಿ ನಕ್ಸಲೀಯರು ಚುನಾವಣೆಯನ್ನು ಬಹಿಷ್ಕರಿಸುವಂತೆ ನೀಡಿದ್ದ ಕರೆಯನ್ನು ಗ್ರಾಮಸ್ಥರು ಸಾರಾಸಗಟಾಗಿ ತಿರಸ್ಕರಿಸಿದ್ದರು. 2008ರಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನಾ ದಿನ ನಕ್ಸಲೀಯರು ಕಾರ್ಕಳ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಪೊಲೀಸರ ಮಾಹಿತಿದಾರ, ಶಿಕ್ಷಕ ಭೋಜ ಶೆಟ್ಟಿ ಮತ್ತು ಅವರ ಸಂಬಂಧಿ ಸುರೇಶ ಶೆಟ್ಟಿ ಎಂಬವರನ್ನು ಕೊಂದ ನಕ್ಸಲೀಯರು ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದರೂ, ನಕ್ಸಲೀಯ ಚಟುವಟಿಕೆ ಇರುವ ಗ್ರಾಮಗಳ ಜನರು ದಾಖಲೆ ಪ್ರಮಾಣದ ಶೇ. 80ರಷ್ಟು ಮತದಾನದಲ್ಲಿ ಭಾಗವಹಿಸಿದ್ದು, ಆ ಮೂಲಕ ಪ್ರಜಾಪ್ರಭುತ್ವದಲ್ಲಿ ತಮಗಿರುವ ವಿಶ್ವಾಸ ವ್ಯಕ್ತಪಡಿಸಿದ್ದರು.
ನಕ್ಸಲರ ಸಂಖ್ಯೆ ಕಡಿಮೆಯಾಗುತ್ತಿದೆ: ಇದು ಬಂದೂಕು ಹಿಡಿದು 'ಪ್ರಜಾರಾಜ್ಯ' ಕನಸು ಕಾಣುತ್ತಿರುವ ನಕ್ಸಲೀಯರಿಗೆ ನಿರಾಶೆಗೆ ಕಾರಣವಾಗಿತ್ತು. ತಮ್ಮ ಜೊತೆ ಇರುವಂತೆ ಕಾಣುವ ಕಾಡಂಚಿನ ಗ್ರಾಮಸ್ಥರು ತಮ್ಮ ಜೊತೆ ಇಲ್ಲ ಎಂಬುದು ಅವರಿಗೆ ಖಾತರಿಯಾಗಿದೆ. ಅಲ್ಲದೇ ಪೊಲೀಸರು ಹತ್ತಾರು ನಕ್ಸಲೀಯರನ್ನು ಕೊಂದು ಹಾಕಿದ್ದರಿಂದ ಅವರ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಈ ಬಾರಿಯಂತೂ ಚುನಾವಣೆ ಬಗ್ಗೆ ನಕ್ಸಲೀಯರು ತುಟಿಪಿಟಿಕ್ಕೆಂದಿರಲಿಲ್ಲ.
ಇದರಿಂದ ಪೊಲೀಸರು ಕರೆನಾಡು - ಮಲೆನಾಡಿನಿಂದ ನಕ್ಸಲೀಯರು ಕಾಲುಕಿತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಬುಧವಾರ ಚಿಕ್ಕಮಗಳೂರಿನ ಕರೆಕಟ್ಟೆಯಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ನಾಲ್ಕೈದು ನಕ್ಸಲೀಯರು ಪೊಲೀಸರಿಗೆ ಮುಖಾಮುಖಿಯಾಗಿದ್ದಾರೆ ಮತ್ತು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾರೆ. ಅಂದರೇ ನಕ್ಸಲೀಯರು ಕಾಲುಕಿತ್ತಿಲ್ಲ. ಒಂದಷ್ಟು ಕಾಲ ಸುಮ್ಮನಿದ್ದು, ಹೊಸ ತರಹದ ಕಾರ್ಯಾಚರಣೆಗೆ ಸಿದ್ಧರಾಗುತ್ತಿದ್ದಾರೆ ಎಂದಾಯಿತು.