ಡಾ.ಎನ್. ನಾರಾಯಣ ಶೆಟ್ಟಿಗೆ ಇಂದು ಅಭಿನಂದನೆ
ಉಡುಪಿ: ಯಕ್ಷಗಾನ ಛಂದಸ್ಸಿನ ಪ್ರಕಾರದಲ್ಲಿ ರಾಜ್ಯ ಮಟ್ಟದ ವಿದ್ವಾಂಸರು ಗಮನಿಸುವಂತೆ ಚಿಂತನ- ಅಧ್ಯಯನ - ಸಂಶೋಧನಗಳನ್ನು ನಡೆಸಿದ ಡಾ.ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ 80ರ ಅಭಿನಂದನೆಯನ್ನು ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಸಂಯೋಜಿಸುತ್ತಿದೆ. ಭಾನುವಾರ ಇಲ್ಲಿನ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 9.30 ಗಂಟೆಗೆ ಮಂಗಳೂರು ವಿವಿಯ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ.ಕೆ. ಚೆನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಉದ್ಘಾಟಿಸಲಿರುವರು. ನಂತರದಲ್ಲಿ ಪ್ರೊ. ಪಾದೆಕಲ್ಲು ವಿಷ್ಣುಭಟ್ಟರ ಅಧ್ಯಕ್ಷತೆಯಲ್ಲಿ ಡಾ. ನಾರಾಯಣ ಶೆಟ್ಟಿ ಅವರ ಬದುಕು - ಬರಹ ಸಮಾವಲೋಕನ, ಗರ್ಭಕವಿತ್ವದ ಪದಪ್ರಸ್ತುತಿ, ಆಯ್ದ ಆಖ್ಯಾನದ ತಾಳಮದ್ದಲೆಗಳಂಥಹ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಡಾ. ನಾರಾಯಣ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಿರುವರು. ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಹೊಸ್ತೋಟ ಮಂಜುನಾಥ ಭಾಗವತ, ಅಂಬಾತನಯ ಮುದ್ರಾಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಲಾಪೋಷಕ ತಲ್ಲೂರು ಕನಕಾ - ಅಣ್ಣಯ್ಯ ಶೆಟ್ಟಿ ಅವರ ಗೌರವಾರ್ಥವಾಗಿ ನೀಡುವ ಪ್ರಶಸ್ತಿಯನ್ನು ಈ ಬಾರಿ ನಾರಾಯಣ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ರು. 20,000 ಗೌರವ ಧನವನ್ನು ಹೊಂದಿದೆ ಎಂದು ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮತ್ತು ಪ್ರಧಾನ ಕಾಯದರ್ಶಿ ಮುರಳಿ ಕಡೆಕಾರ್ ತಿಳಿಸಿದ್ದಾರೆ.