26ರಂದು 'ಬ್ರಾಹ್ಮಿನ್ ಬಲ್ಲಾಳಾಸ್ ಆಫ್ ದಕ್ಷಿಣ ಕನ್ನಡ' ಕೃತಿ ಬಿಡುಗಡೆ
ಉಡುಪಿ: ಮೂಲತಃ ಉಡುಪಿಯ ಚಿಟ್ಪಾಡಿ ಬೀಡಿನವರಾದ ಪ್ರಸ್ತುತ ಮಂಗಳೂರಿನ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಆರ್. ಬಲ್ಲಾಳ್ ಬರೆದಿರುವ 'ಬ್ರಾಹ್ಮಿನ್ ಬಲ್ಲಾಳಾಸ್ ಆಫ್ ದಕ್ಷಿಣ ಕನ್ನಡ' ಎಂಬ ಅಧ್ಯಯನ ಗ್ರಂಥದ ಬಿಡುಗಡೆ ಸಮಾರಂಭ ಮೇ 26ರಂದು ಸಂಜೆ 4 ಗಂಟೆಗೆ ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಳದ ಭವಾನಿ ಮಂಟಪದಲ್ಲಿ ನಡೆಯಲಿದೆ.
ಭಾವಿ ಪರ್ಯಾಯ ಪೀಠಾಧೀಶ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಈ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮಣಿಪಾಲ ವಿವಿಯ ಸಹಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಲೀಲಾ ಉಪಾಧ್ಯಾಯ ಪುಸ್ತಕ ಪರಿಚಯ ಮಾಡಲಿದ್ದಾರೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜೈನ, ಬಂಟ ಮತ್ತು ಬ್ರಾಹ್ಮಣ ಸಮಾಜಗಳಲ್ಲಿ 'ಬಲ್ಲಾಳ' ಎಂಬುದು ಉಪನಾಮ (ಸರ್ ನೇಮ್) ಆಗಿ ಬಳಸಲ್ಪಡುತ್ತದೆ. ಈ ಉಪನಾಮದ ಹಾಗೂ ಈ ಶಬ್ದದ ಉತ್ಪತ್ತಿಯ ಬಗ್ಗೆ ವಿವಿಧ ಮೂಲಗಳಲ್ಲಿ ಶೋಧಿಸುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಲಾಗಿದೆ.
'ಬ್ರಾಹ್ಮಣ ಬಲ್ಲಾಳ' ಮನೆತನಗಳ ಬೀಡುಗಳ ವಿವರ, ಉಲ್ಲೇಖ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಲ್ಲಿ 'ಬಲ್ಲಾಳ' ಉಪನಾಮ ಇರುವಿಕೆಯ ಮಾಹಿತಿಗಳು ಪುಸ್ತಕದಲ್ಲಿ ನಿರೂಪಿಸಲಾಗಿದೆ ಎಂದು ಡಾ. ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚಿಟ್ಪಾಡಿ ಬೀಡಿನ ಯಜಮಾನರಾದ ಸಿ.ಜಿ. ಬಲ್ಲಾಳ್ ಮತ್ತು ವಿಶ್ವನಾಥ ಉಡುಪ ಮತ್ತಿತರರು ಇದ್ದರು.
ಮಂಗಳೂರಿನಲ್ಲಿ ಧಾರಾಕಾರ ಮಳೆ
ಮಂಗಳೂರು: ನಗರದಲ್ಲಿ ಸೋಮವಾರ ತಡರಾತ್ರಿ ಧಾರಾಕಾರ ಮಳೆಯಾಗಿದೆ. ರಾತ್ರಿ ಸುಮಾರು 11ರಿಂದ 12 ಗಂಟೆವರೆಗೆ ಗುಡುಗು- ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿದಿದೆ.