'ಏನೂ ಅರಿಯದವರ ಮಾತಿಂದ ಯಕ್ಷಗಾನಕ್ಕೆ ಕುಂದಾಗದು'
ಆಲೂರು: ಯಕ್ಷಗಾನದ ಸಂಪ್ರದಾಯ, ಪರಂಪರೆ, ತಾಳ, ಲಯದ ಬಗ್ಗೆ ಕಿಂಚಿತ್ತೂ ಅರಿಯದ ಇತ್ತೀಚಿಗೆ ಬೆಳಕಿಗೆ ಬಂದ ಸಿನಿಮಾ ನಟಿಯೊಬ್ಬರ ಅಗ್ಗದ ಮಾತಿನಿಂದಾಗಿ ಗಂಡು ಕಲೆಯಾದ ಯಕ್ಷಗಾನದ ಗೌರವ, ಘನತೆಗೆ ಕುಂದಾಗದು ಎಂದು ಮಣಿಪಾಲ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಸ್.ವಿ. ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ವಂಡ್ಸೆ ಸಮೀಪ ಆಲೂರಿನಲ್ಲಿ ನಡೆದ ಶ್ರೀ ಸಿಂಗದೂರು ಮೇಳದ ಈ ವರ್ಷದ ಪ್ರಸಿದ್ಧ ಪ್ರಸಂಗ -ಮೊಗವೀರಪೇಟೆ ಕ್ಷೇತ್ರ ಮಹಾತ್ಮೆ- ಪ್ರಸಂಗದ 105 ನೇ ಪ್ರಯೋಗ ಆಚರಣೆ ಪ್ರಸಂಗಕರ್ತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ರಾಜ್‌ಕುಮಾರ್, ವಿಷ್ಣುವರ್ದನ್, ಅನಂತನಾಗ್‌ರಂತಹ ಮೇರು ಚಿತ್ರನಟರು ಯಕ್ಷಗಾನ ಕಲೆಗೆ ಮನಸೋತು ಮೆಚ್ಚುಗೆಯ ಮಾತಗಳನ್ನಾಡಿರುವಾಗ ಎಳೆಯ ನಟಿ ಟಿ.ವಿ. ಶೋ ಒಂದರಲ್ಲಿ ಯಕ್ಷಗಾನ ಹಾಡುಗಳನ್ನು ಡಬ್ಬಾ ಹಾಡುಗಳು ಎಂದು ಅವಹೇಳನ ಮಾಡಿದುದರ ಬಗ್ಗೆ ಕಲಾರಸಿಕರು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಇದು ಆ ನಟಿಯ ಸಂಸ್ಕಾರವನ್ನು ಸೂಚಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇಳದ ಯಜಮಾನರಾದ ಎಂ. ಜಿ. ಕಾಂಚನ್ ಅವರು ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರರನ್ನು ಬಂಗಾರದ ಉಂಗುರ ತೊಡಿಸಿ ಸನ್ಮಾನಿಸಿದರು ಹಾಗೂ ಪ್ರಸಂಗ ಶತದಿನೋತ್ಸವ ಆಚರಿಸಲು ಸಹಕರಿಸಿದ ಮೇಳದ ಸರ್ವ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತಾಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ಗ್ರಾಪಂ ಸದಸ್ಯ ರವೀಂದ್ರ ಶೆಟ್ಟಿ, ಉದ್ಯಮಿ ರತ್ನಾಕರ ಶೆಟ್ಟಿ, ದೇವಸ್ಥಾನದ ಮುಕ್ತೇಸರ ಅಚ್ಯುತ ಕುಲಾಲ್‌ಲ್ಮುಂತಾದವರು ಉಪಸ್ಥಿತರಿದ್ದರು.
ರಾಜೇಂದ್ರ ಸೆಟ್ಟಿಗಾರ್ ಕಾರ್ಯಕ್ರಮ ಸಂಯೋಜಿಸಿದರು.
ಗುಂಡು ಕಾಂಚನ್ ಸ್ವಾಗತಿಸಿ, ರಾಜೇಶ್ ಉಳ್ತೂರು ವಂದಿಸಿದರು.