ಉಡುಪಿ: ಬಿಜೆಪಿಯಿಂದ 28ರಂದು ಜೈಲ್ ಭರೋ
ಉಡುಪಿ: ರಾಷ್ಟ್ರೀಯ ಸುರಕ್ಷತೆ, ಬೆಲೆ ಏರಿಕೆ ನಿಯಂತ್ರಣದ ಬಗ್ಗೆ ಕೇಂದ್ರ ಯುಪಿಎ ಸರ್ಕಾರದ ನಿರ್ಲಕ್ಷ್ಯ ಹಾಗೂ ನಿರಂತರವಾಗಿ ಬೆಳಕಿಗೆ ಬರುತ್ತಿರುವ ಕೇಂದ್ರ ಕಾಂಗ್ರೆಸ್ ನಾಯಕರ ಹಗರಣಗಳ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿಯು 28ರಂದು ಬೆಳಗ್ಗೆ 10.30 ಗಂಟೆಗೆ ಸರ್ವಿಸ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ, ಜೈಲ್ ಭರೋ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾರತದೊಳಗೆ ಚೀನಾದ ಸೈನಿಕರ ಪ್ರವೇಶ, ಅಸ್ಸಾಂನಲ್ಲಿ ಬಾಂಗ್ಲಾ ದೇಶದ ಅಕ್ರಮ ವಲಸೆಗಾರರಿಗೆ ಮತದಾನದ ಹಕ್ಕು, ಪಾಕ್ ಪ್ರೇರಿತ ಭಯೋತ್ಪಾದನೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುವ ಇಚ್ಚಾಶಕ್ತಿಯನ್ನು ಯುಪಿಎ ಸರ್ಕಾರ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದುರ್ಬಲ ಆರ್ಥಿಕ ನೀತಿಯಿಂದಾಗಿ ಬೆಲೆ ಏರಿಕೆ ನಿಯಂತ್ರಣ ಇಲ್ಲದೇ ಮಧ್ಯಮ ವರ್ಗದ ಜನರ ಬದುಕು ಕಷ್ಟಕರವಾಗಿದೆ. ಯುಪಿಎ ಸರ್ಕಾರದ ನಾಯಕರ ಹಗರಣಗಳಿಂದಾಗಿ ಭಾರತದ ಮಾನ ಇತರ ದೇಶಗಳ ಎದುರು ಹರಾಜಾಗಿದೆ ಎಂದರು.
ಆದ್ದರಿಂದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಇಡೀ ದೇಶದಲ್ಲಿಯೇ ಈ ಹೋರಾಟವನ್ನು ನಡೆಸುತ್ತಿದೆ. ಅದರಂತೆ ಉಡುಪಿಯಲ್ಲಿಯೂ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮತ್ತು ಶ್ಯಾಮಲಾ ಕುಂದರ್, ಉಪಾಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಗ್ರಾಮೀಣ ಬಿಜೆಪಿ ಅಧ್ಯಕ್ಷ ಹರಿಮಕ್ಕಿ ರತ್ನಾಕರ ಶೆಟ್ಟಿ ಮುಂತಾದವರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಆರಂಭ
ರಾಜ್ಯದಲ್ಲಿ ಅಗ್ಗದ ಮದ್ಯ ತಯಾರಿ- ಮಾರಾಟಕ್ಕೆ ಯೋಚನೆ, ನೂತನ ತಾಲೂಕು ರಚನೆ ಪ್ರಸ್ತಾಪಕ್ಕೆ ತಡೆ ಮತ್ತು ಉಡುಪಿಯ ಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಪ್ರಸ್ತಾಪ ಮಾಡುವುದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸೋಲು ಆರಂಭವಾಗಿದೆ.
ಟಿ ಉದಯಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ