31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ
ಮಣಿಪಾಲ: ಜಿಲ್ಲಾಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು 31ರಂದು ಬೆಳಗ್ಗೆ 9 ಗಂಟೆಗೆ ಮಣಿಪಾಲ ವಿಶ್ವವಿದ್ಯಾಲಯದ ಇಂಟರ್ಯಾಕ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಉದ್ಘಾಟಿಸುವರು. ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ, ಯು.ಎಸ್.ಎ ಓಹಿಯೋ ಸ್ಟೇಟ್ ವಿ.ವಿ. ಪ್ರೊ. ನಾಗರಾಜ ಹೈಕಾಡಿ ಹಾಗೂ ಉಡುಪಿ ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿ ಎಂ. ಜುಂಜಣ್ಣ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ ಕೆ.ಎಂ.ಸಿ. ಯ ಔಷಧಿ ವಿಭಾಗದ ಸಹಪ್ರಾಧ್ಯಾಪಕ ಡಾ.ಮುರಳೀಧರ್ ವರ್ಮ ಹಾಗೂ ಮಣಿಪಾಲ ಕೆ.ಎಂ.ಸಿ ಯ ಕ್ಯಾನ್ಸರ್ ಮತ್ತು ರೇಡಿಯೋಥೆರಪಿ ವಿಭಾಗದ ಸಹಪ್ರಾಧ್ಯಾಪಕ ಡಾ.ಪಿ.ಯು.ಸಕ್ಸೇನಾ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಕೆಎಂಸಿಯ ಸಮುದಾಯ ಆರೋಗ್ಯ ವಿಭಾಗ, ಮಣಿಪಾಲ ಕಾಲೇಜು ಆಫ್ ನರ್ಸಿಂಗ್, ಮಣಿಪಾಲ ಅರ್ಚನಾ ಚಾರಿಟೇಬಲ್ ಟ್ರಸ್ಟ್, ಉಡುಪಿ ಹೆಲ್ತ್ ಕ್ಯಾನ್ಸರ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ನಾಳೆ ಭಾರತ್ ಬ್ಯಾಂಕ್ 53ನೇ ಶಾಖೆ ಆರಂಭ
ಮೂಲ್ಕಿ: ಭಾರತ್ ಬ್ಯಾಂಕ್‌ನ 53ನೇ ಶಾಖೆಯು ಮೂಲ್ಕಿಯ ಬಸ್ ನಿಲ್ದಾಣದ ಬಳಿಯ ಶಾಂಭವಿ ಕಾಂಪ್ಲೆಕ್ಸ್‌ನಲ್ಲಿ ಮೇ 30ರಂದು ಆರಂಭಗೊಳ್ಳಲಿದ್ದು ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಬ್ಯಾಂಕಿನ ಕಾರ್ಯಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್ ಬ್ಯಾಂಕಿನ ವ್ಯವಹಾರಕ್ಕೆ ಚಾಲನೆ ನೀಡಲಿದ್ದಾರೆ. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ರೋಹಿಣಿ ಜೆ. ಸಾಲ್ಯಾನ್ ಎಟಿಎಂ ಸೌಲಭ್ಯ ಉದ್ಘಾಟಿಸಲಿದ್ದು ಭದ್ರತಾ ಕೊಠಡಿಯನ್ನು ನಿರ್ದೇಶಕಿ ಪುಷ್ಪಲತಾ ಎನ್. ಸಾಲ್ಯಾನ್ ಉದ್ಘಾಟಿಸಲಿದ್ದಾರೆ.