ಖಾಲಿದ್ ಕಸ್ಟಡಿ ಸಾವು; ಎಸ್ಡಿಪಿಐ ಪ್ರತಿಭಟನೆ
ಉಡುಪಿ: ಖಾಲಿದ್ ಮುಜಾಹಿದ್ ಕಸ್ಟಡಿ ಸಾವು ಮತ್ತು ವಕೀಲರ ದಾಳಿಯನ್ನು ಖಂಡಿಸಿ ಇಲ್ಲಿನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇತ್ತೀಚಿಗೆ ಉಡುಪಿ ಜಿಲ್ಲಾ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯದ್ದೇಶಿಸಿ ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನ್ಯಾಮತ್ ಆಲಿ ಮಾತನಾಡಿ, ಪೊಲೀಸ್ ಕಸ್ಟಡಿಯಲ್ಲಿ ಅನುಮಾನಸ್ಪದವಾಗಿ ಸಾವು ಸಂಭವಿಸಿದ್ದು, ಮುಸ್ಲಿಂರಿಗೆ ಜೈಲುಗಳು ಯಾವ ರೀತಿ ಅಸುರಕ್ಷಿತವಾಗಿದೆ ಎಂಬುದನ್ನು ಸೂಚಿಸುತ್ತದೆ. ಮುಸ್ಲಿಂರು ಜೈಲುಗಳಲ್ಲಿ ಸುರಕ್ಷಿತರಲ್ಲ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ ಎಂದರು. ಪ್ರತಿಭಟನೆಯಲ್ಲಿ ಎಸ್ಡಿಪಿಐ ಉಪಾಧ್ಯಕ್ಷ ಮಹಮ್ಮದ್ ಜಫ್ರಿ, ಪ್ರಧಾನ ಕಾರ್ಯದರ್ಶಿ ಹಕಿಂ ಉಚ್ಚಿಲ ಇದ್ದರು. ನಂತರ ನ್ಯಾಮತ್ ಆಲಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಖಾಲಿದ್ ಮುಜಾಹಿದ್ ಕುಟುಂಬಕ್ಕೆ ತಕ್ಷಣವೇ 50 ಲಕ್ಷ ಪರಿಹಾರ ಹಾಗೂ ಪ್ರಮಾದವೆಸಗಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.