ವಸತಿ ಯೋಜನೆ ಸಹಾಯಧನ ಬಿಡುಗಡೆಗೆ ಆಗ್ರಹ
ಉಡುಪಿ: ನಿರ್ಮಾಣ ಹಂತದಲ್ಲಿರುವ ಬಸವ ವಸತಿ, ಇಂದಿರಾ ಆವಾಜ್ ಮೊದಲಾದ ವಸತಿ ಯೋಜನೆಗಳಿಗೆ ಚುನಾವಣೆ ಇತ್ಯಾದಿ ತಾಂತ್ರಿಕ ಕಾರಣಗಳಿಂದಾಗಿ ತಡೆಹಿಡಿಯಲಾಗಿರುವ ಸಹಾಯಧನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಮಂಗಳವಾರ ನಡೆದ ಉಡುಪಿ ತಾ. ಪಂ. ಸಭೆಯಲ್ಲಿ ಆಗ್ರಹಿಸಲಾಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ದೇವದಾಸ ಹೆಬ್ಬಾರ್, ತಾಲೂಕಿನಲ್ಲಿ ಅನುಷ್ಠಾನಗೊಂಡಿರುವ ವಿವಿಧ ವಸತಿ ಯೋಜನೆಗಳಿಗೆ ಸಕಾಲದಲ್ಲಿ ಹಣ ಬಿಡುಗಡೆಯಾಗಿಲ್ಲ. ಆ ಕಾರಣದಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತು, ಫಲಾನುಭವಿಗಳು ತೀವ್ರ ತೊಂದರೆಯಲ್ಲಿದ್ದಾರೆ. ಮಳೆಗಾಲ ಸಮೀಪಿಸುತ್ತಿರುವ ಈ ದಿನಗಳಲ್ಲಿ ಪಡಬಾರದ ಬವಣೆ ಪಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹಣ ಬಿಡುಗಡೆಗೆ ವಿಳಂಬವಾಯಿತು. ಚುನಾವಣೆ ನಡೆದ ಬಳಿಕವೂ ಹಣ ಬಿಡುಗಡೆಯಾಗಿಲ್ಲ ಎಂದರು.
ವಿಪಕ್ಷ ಸದಸ್ಯರಾದ ಉಮೇಶ ನಾಯ್ಕ, ಡಾ. ಸುನಿತಾ ಶೆಟ್ಟಿ, ವೆರೊನಿಕಾ ಕರ್ನೇಲಿಯೊ ಮೊದಲಾದವರು ಹೆಬ್ಬಾರ್ ಮಾತಿಗೆ ದನಿಗೂಡಿಸಿದರು.
3-4 ದಿನಗಳಲ್ಲಿ ಬಿಡುಗಡೆ: ಇದಕ್ಕೆ ಉತ್ತರಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಡಿ. ಮಂಜುನಾಥಯ್ಯ, ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನು 3-4 ದಿನಗಳಲ್ಲಿ ಹಣ ಬಿಡುಗಡೆಯಾಗುತ್ತದೆ ಎಂದರು.
ವೆರೋನಿಕಾ ಕರ್ನೇಲಿಯೋ ಅವರು ಪಡಿತರಚೀಟಿ ಸಮಸ್ಯೆಯನ್ನು ಸಭೆಯ ಮುಂದಿಟ್ಟರು. ಹೊಸತಾಗಿ ಪಡಿತರ ಕಾರ್ಡ್‌ನಲ್ಲಿ ಹೆಸರು ಸೇರಿಸುವಾಗಲೂ ಸೂಚಕರನ್ನು ನೇಮಿಸಬೇಕೆಂಬ ಸರ್ಕಾರದ ಸುತ್ತೋಲೆಯನ್ನು ಆಕ್ಷೇಪಿಸಿದರು.
ಈ ಬಗ್ಗೆ ಸಂಬಂಧಿತ ಇಲಾಖಾಧಿಕಾರಿ ಇದು ಸರ್ಕಾರದ ಆದೇಶ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಮುಂದೆ ಪಡಿತರ ಚೀಟಿಗಾಗಿ ಮನೆಯವರ ಭಾವಚಿತ್ರಗಳನ್ನು ಗ್ರಾಪಂ ಮಟ್ಟದಲ್ಲಿಯೇ ತೆಗೆಸಿಕೊಳ್ಳಲು ಏಜೆನ್ಸಿ ನೇಮಿಸುವ ಪ್ರಸ್ತಾವ ಇದೆ ಎಂದರು.
ಪ್ರಮೋದ್‌ಗೆ ಅಭಿನಂದನೆ: ಶಾಸಕನಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಶಾಸಕ ಪ್ರಮೋದ್ ಸಭೆಗಾಗಮಿಸಿದ್ದು, ಅವರನ್ನು ತಾಪಂ ಅಧ್ಯಕ್ಷೆ ಸ್ವಾಗತಿಸಿ, ಅಭಿನಂದಿಸಿದರು.
ತಾ.ಪಂ.ಗೆ ನೀಡುತ್ತಿರುವ ರು. 1 ಕೋಟಿ ಅನುದಾನ ಹಾಗೂ ಅದರ ಹಂಚಿಕೆಯ ಅವ್ಯವಸ್ಥೆ ಕುರಿತು ಉಮೇಶ ನಾಯ್ಕ ಗಮನ ಸೆಳೆದರು.
ವಸತಿ ಸಮಸ್ಯೆ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಪ್ರಮೋದ್ ಭರವಸೆ ನೀಡಿದರು.
ಉಪಾಧ್ಯಕ್ಷ ರಾಮ ಕುಲಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ದಿವಾಕರ ಹೆಗ್ಡೆ ಇದ್ದರು.