ಅಲಸಂಡೆ ರು. 52, ಬೀನ್ಸ್ 42, ಕ್ಯಾರೇಟ್ 45ಕ್ಕೆ ಏರಿಕೆ
ಉಡುಪಿ: ಚಿನ್ನದ ಬೆಲೆ ಕಡಿಮೆಯಾಗಿದೆ ಎಂದು ಸಂತಸಪಡುತ್ತಿರುವ ಜನಸಾಮಾನ್ಯರು ಈಗ ತರಕಾರಿ- ಹಣ್ಣುಗಳ ಬೆಲೆ ಕೇಳಿ ಬೆಚ್ಚಿ ಬೀಳುತ್ತಿದ್ದಾರೆ. ದಿನನಿತ್ಯ ಬಳಸುವ ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದು, ತರಕಾರಿಕೊಳ್ಳಲು ಮಾರುಕಟ್ಟೆಗೆ ಬಂದ ಜನರು ಬೆಲೆ ಕೇಳಿ ಬರಿಗೈಯಲ್ಲಿ ವಾಪಾಸು ಹೋಗುವ ಪರಿಸ್ಥಿತಿ ಎದುರಾಗಿದೆ.
ಉಡುಪಿ ಮಾರುಕಟ್ಟೆಯಲ್ಲಿ ಜನವರಿ ತಿಂಗಳಲ್ಲಿ ಬೀನ್ಸ್ ಕ್ವಿಂಟಾಲಿಗೆ ರು. 1,800 ಕ್ಕೆ ಮಾರಾಟವಾಗಿದ್ದರೆ, ಮೇ ತಿಂಗಳಲ್ಲಿ ಬರೋಬ್ಬರಿ ರು. 4,200 ಗಳಿಗೆ ಏರಿದೆ. ಕ್ಯಾರೇಟ್ ಕ್ವಿಂಟಾಲಿಗೆ ರು. 1,800 ರಿಂದ ರು. 4,500, ಅಲಸಂಡೆ ರು. 1,800 ರಿಂದ ರು. 5,200 ರಷ್ಟು ಹೆಚ್ಚಳವಾಗಿದೆ.
ಅದೇ ರೀತಿ ತೊಂಡೆಕಾಯಿ ಬೆಲೆ ರು. 1,200 ರಿಂದ ರು. 1,700, ಟೊಮ್ಯಾಟೋ ರು. 1,200 ರಿಂದ ರು. 2200 ನಷ್ಟು ಏರಿಕೆ ಕಂಡಿದೆ. ಮೂಲಂಗಿ, ಹಾಗಲಕಾಯಿ, ಸಿಹಿಕುಂಬಳ, ಸೊರೆಕಾಯಿ, ಕ್ಯಾಬೆಜ್, ಬಿಟ್ರೊಟ್ ಇನ್ನಿತರ ತರಕಾರಿ ಬೆಲೆಗಳು ದುಪ್ಪಟ್ಟು ಮುಪ್ಪಟ್ಟು ದುಬಾರಿಯಾಗಿದೆ.
ಹಣ್ಣುಗಳ ಬೆಲೆ ದುಪ್ಪಟ್ಟು: ಬೆಲೆ ಹೆಚ್ಚಳದ ಬಿಸಿ ಕೇವಲ ತರಕಾರಿಗಳಿಗೆ ಮಾತ್ರವಲ್ಲದೆ ಹಣ್ಣುಗಳಿಗೂ ಮುಟ್ಟಿದೆ. ಸೇಬಿನ ಬೆಲೆ ಕ್ವಿಂಟಾಲಿಗೆ ರು. 10,500 ಗಳಿಂದ ರು. 13,500 ಗಳಿಗೆ ಏರಿಕೆ ಕಂಡಿದ್ದು, ಸೇಬು ಪ್ರಿಯರಿಗೆ ಬೇಸರ ಮೂಡಿಸಿದೆ. ಸೇಬು ಮಾತ್ರವಲ್ಲದೆ ಹಸಿ ದ್ರಾಕ್ಷಿ ಬೆಲೆ ರು. 3,300 ಗಳಿಂದ ರು. 4,300 ರಷ್ಟು, ಮೂಸಂಬಿ ರು. 2,200 ನಿಂದ ರು. 4,700, ಸಪೋಟ ರು. 2,200 ರಿಂದ ರು. 3,300, ಹೆಚ್ಚಳವಾಗಿದ್ದರೆ ಜನವರಿಯಲ್ಲಿ ಕಿತ್ತಳೆ ಹಣ್ಣು ರು. 2,200 ಬೆಲೆಗಳಿದ್ದರೆ ಈ ತಿಂಗಳಲ್ಲಿ ಬರೋಬ್ಬರಿ ರು. 8,500 ನಷ್ಟು ಏರಿಕೆಯಾಗಿದೆ.
ಸಾಂಬಾರು ಪದಾರ್ಥಗಳು ಕೂಡ ಹೆಚ್ಚಳವನ್ನು ಕಂಡಿದೆ. 4 ತಿಂಗಳ ಹಿಂದೆ ತೊಗರಿ ರು. 4,300, ಬಟಾಣಿ 4200, ಕೊತ್ತಂಬರಿ ರು. 8100.
ಆದರೆ, ಈ ತಿಂಗಳು ತೊಗರಿ ರು. 4500, ಬಟಾಣಿ ರು. 5,800, ಕೊತ್ತಂಬರಿ ರು. 10500 ನಷ್ಟು ಬೆಲೆ ದುಪ್ಪಾಟ್ಟಾಗಿದೆ. ಉಳಿದಂತೆ ಬೆಲ್ಲ, ಈರುಳ್ಳಿ, ಬೆಳ್ಳುಳ್ಳಿ, ಅಕ್ಕಿ, ಭತ್ತ, ರಾಗಿ, ಗೋಧಿ ಇವುಗಳು ಬೆಲೆಯಲ್ಲಿಯೂ ಹೆಚ್ಚಳಕಂಡಿದ್ದು, ಮೆಣಸಿನಕಾಯಿ ದರವೇ ಖಾರವಾಗಿದೆ.
ಫಸಲು ಕುಂಠಿತ- ಬೇಡಿಕೆ ಹೆಚ್ಚಳ: ಒಂದೆಡೆ ಮಳೆ ಇಲ್ಲದೇ ತರಕಾರಿ ಫಸಲು ಕುಂಠಿತಗೊಂಡಿರುವುದು ಬೆಲೆ ಏರಿಕೆಗೆ ಕಾರಣವಾದರೇ, ಇನ್ನೊಂದೆಡೆ ಇದು ಮದುವೆ- ಮುಂಜಿ- ಇನ್ನಿತರ ಶುಭದಿನಗಳ ಕಾಲವಾಗಿರುವುದರಿಂದ ತರಕಾರಿ - ಹಣ್ಣುಹಂಪಲುಗಳ ಬೇಡಿಕೆ ಹೆಚ್ಚಿದ್ದು, ವ್ಯಾಪಾರಿಗಳು ಸಹಜವಾಗಿ ಬೆಲೆ ಬೇಕಾಬಿಟ್ಟಿ ಏರಿಸಿದ್ದಾರೆ.
ಶುಭ ಕಾರ್ಯಗಳನ್ನು ಮಾಡುವವರು ಬಂದ ಅತಿಥಿಗಳಿಗೆ ಹೊಟ್ಟೆ ತುಂಬಾ ಬಡಿಸಿ ಸಂತುಷ್ಟಿಗೊಳಿಸಲೇಬೇಕು. ಆದ್ದರಿಂದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಯೇ ಇರಲಿ, ಕೊಳ್ಳಲೇಬೇಕು. ಈ ಅನಿವಾರ್ಯತೆಯನ್ನು ವ್ಯಾಪಾರಿಗಳು, ಮಧ್ಯವರ್ತಿಗಳು ತಮ್ಮ ಲಾಭಕೋರತನಕ್ಕೆ ಬಳಸಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಕೇವಲ 3 ತಿಂಗಳ ಅಂತರದಲ್ಲಿ ಬೆಲೆ 3 ಪಟ್ಟು ಹೆಚ್ಚಾಗುವುದಿಲ್ಲ.
ಬಹುಶಃ ಜೂನ್ ಆರಂಭದಲ್ಲಿ ಮಳೆ ಆರಂಭವಾದ ಮೇಲೆ, ಶುಭಕಾರ್ಯಗಳು ಕಡಿಮೆಯಾದ ಮೇಲೆ, ತರಕಾರಿ ಬೇಡಿಕೆ ಕಡಿಮೆಯಾಗಿ, ವ್ಯಾಪಾರಿಗಳು ಅನಿವಾರ್ಯವಾಗಿ ತರಕಾರಿ ಬೆಲೆ ಇಳಿಸಬಹುದು ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಇದ್ದಾರೆ.
ಮಳೆ ಕೈಕೊಟ್ಟರೆ ಅಥವಾ ಬೆಲೆ ಇಳಿಕೆ ಕಾಣದೆ ಹೋದರೆ ತರಕಾರಿ ಹಾಕದ ಅಡುಗೆಯೇ ಗತಿ.