ಕನ್ನಡ ಸಾಫ್ಟ್‌ವೇರ್ ಜನಪ್ರಿಯಕ್ಕೆ ಕ್ರಮ : ಸಚಿವ ರಮಾನಾಥ ರೈ
ಮಂಗಳೂರು: 'ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯುನಿಕೋಡ್ ಸಾಫ್ಟ್‌ವೇರ್‌ನ್ನು ಜನಪ್ರಿಯಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇದನ್ನು ಜಾರಿಗೆ ತರಲಾಗುವುದು' ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಶನಿವಾರ ನಗರದ ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾಷೆಯ ಅಧ್ಯಯನವು ಒಂದು ನಾಡಿನ ಸಂಸ್ಕೃತಿ ಮತ್ತು ಜನಜೀವನದ ಅರಿವಾಗಿದೆ. ಭಾಷೆಯ ಕಡಿಮೆ ಬಳಕೆ ಅಲ್ಲಿನ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದರು.
ಕರ್ನಾಟಕ ಕರಾವಳಿಯ ಗಡಿನಾಡಾದ ಕಾಸರಗೋಡಿನಲ್ಲಿ ಕನ್ನಡ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಮಂಜೇಶ್ವರದಲ್ಲಿ ರಾಷ್ಟ್ರಕವಿ ಎಂ. ಗೋವಿಂದ ಪೈ ಪ್ರತಿಷ್ಠಾನ ಸಭಾಂಗಣ ನಿರ್ಮಾಣಕ್ಕೆ ರು. 50 ಲಕ್ಷ ಅನುದಾನ ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ ಎಂದರು.
ಕನ್ನಡ ಬರಿ ಭಾಷೆಯಲ್ಲ, ಅದೊಂದು ಶಕ್ತಿಯಾಗಿದೆ. ನಮ್ಮ ನಾಡು-ನುಡಿ ಹಾಗೂ ಸಂಸ್ಕೃತಿಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಆದ್ದರಿಂದ ಇದರ ಪರಂಪರೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗ ಕರ್ತವ್ಯ ಎಂದರು.
ಅರಣ್ಯ ಪ್ರದೇಶ ಒತ್ತುವರಿ ತಡೆಯುವುದು ಸರ್ಕಾರದ ಆದ್ಯತೆಯಾಗಿದ್ದು, ಗ್ರಾಮ ಅರಣ್ಯ ಸಮಿತಿಗಳ ಪುನಶ್ಚೇತನಕ್ಕಾಗಿ ರು. 7 ಕೋಟಿ ಮೀಸಲಿರಿಸಲಾಗಿದೆ. ಗಂಧದ ನಾಡಿನಲ್ಲಿ ಗಂಧದ ಮರಗಳ ನೆಡುತೋಪು ಹೆಚ್ಚಿಸಲು ಮತ್ತು ಸಂರಕ್ಷಣೆಗೆ 'ಸಿರಿ ಚಂದನವನ' ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಎನ್. ಪ್ರಕಾಶ್, ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೋ, ಮಂಗಳೂರು ಉತ್ತರ ಶಾಸಕ ಬಿ.ಎ. ಮೈದಿನ್ ಬಾವ, ದ.ಕ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ನಾಯ್ಕ್ ಇದ್ದರು.
ಮಹಿಳಾ ಆರಕ್ಷಕ ದಳ, ಗೃಹರಕ್ಷಕ ದಳ, ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡ, ಎನ್‌ಸಿಸಿ ತಂಡ, ಎನ್‌ಸಿಸಿ ನೌಕಾದಳ, ಎನ್‌ಸಿಸಿ ಭೂಸೇನೆ ದಳ, ಸ್ಕೌಟ್, ಗೈಡ್ಸ್ ಮತ್ತು ಭಾರತ ಸೇವಾದಳ ತಂಡ, ಪೊಲೀಸ್ ವಾದ್ಯ ತಂಡ ಪಥಸಂಚಲನದಲ್ಲಿ ಭಾಗವಹಿಸಿದ್ದವು. ಭಾರತ ಸೇವಾದಳ ಪ್ರಥಮ ಮತ್ತು ಎನ್‌ಸಿಸಿ ನೌಕಾದಳ ದ್ವಿತೀಯ ಸ್ಥಾನ ಪಡೆದು ಗೌರವಿಸಲ್ಪಟ್ಟವು.
ನೆಹರೂ ಮೈದಾನದಲ್ಲಿ ಮಂಗಳೂರು ಉತ್ತರವಲಯ ಶಿಕ್ಷಣ ಸಂಸ್ಥೆಗಳ ಮಕ್ಕಳಿಂದ 'ಕರುನಾಡ ವೈಭವ' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜ್ಯೋತಿ ವೃತ್ತದಿಂದ ಕನ್ನಡಾಂಬೆಯ ಭಾವಚಿತ್ರವಿರುವ ಮಂಟಪವನ್ನು ಮೆರವಣಿಗೆಯಲ್ಲಿ ನೆಹರೂ ಮೈದಾನಕ್ಕೆ ತರಲಾಯಿತು. ಈ ಸಂದರ್ಭ ಡೋಲು ಕುಣಿತ, ನವಿಲಿನ ನೃತ್ಯ ಪ್ರದರ್ಶನ, ತೆಂಗಿನ ಗರಿಯನ್ನು ಹಾಕಿಕೊಂಡು ನರ್ತಿಸುತ್ತಿದ್ದ ತಂಡ, ಕೃಷಿ ಮತ್ತು ಗ್ರಾಮೀಣ ಕೆಲಸಗಳನ್ನು ಬಿಂಬಿಸುವ ಮಕ್ಕಳ ಟ್ಯಾಬ್ಲೋ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕರನ್ನು ನೆನಪಿಸಿದ ಮಕ್ಕಳ ಪ್ರಾತ್ಯಕ್ಷಿಕೆಗಳು ಕಂಡುಬಂದವು.