ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಧರ್ಮಸ್ಥಳ ನಿಂದಕರ ವಿರುದ್ಧ ಕಾನೂನು ಸಮರ: ನಿರ್ಧಾರ

Mainashree
Updated On : 2 Nov 2013, 12:17 pm

ಮಂಗಳೂರು: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಹಾಗೂ ದಾಖಲೆ ರಹಿತ ಮಾತನಾಡಿ ತೇಜೋವಧೆ ನಡೆಸಿದವರ ವಿರುದ್ಧ ಕಾನೂನು ಸಮರಕ್ಕೆ ನಗರದ ಎಸ್‌ಡಿಎಂ ಕಾನೂನು ಕಾಲೇಜ್ ನಿರ್ಧರಿಸಿದೆ.
ಶುಕ್ರವಾರ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಬಿ.ಕೆ.ರವೀಂದ್ರ, ಡಾ.ವೀರೇಂದ್ರ ಹೆಗ್ಗಡೆ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರಾಗಿದ್ದು, ಅವರ ಹಾಗೂ ಕ್ಷೇತ್ರದ ವಿರುದ್ಧ ಮಾಡಿರುವ ದಾಖಲೆ ರಹಿತ ಆರೋಪಗಳಿಂದ ಎಲ್ಲರ ಮನಸ್ಸಿಗೆ ನೋವಾಗಿದೆ. ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣವನ್ನು ಗುರಿಯಾಗಿಸಿ ಮಹೇಶ್ ಶೆಟ್ಟಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ ನಾಯಕ್ ಬಹಿರಂಗವಾಗಿ ನಿಂದಿಸಿದ್ದಾರೆ. ಈ ಕುರಿತು ಎಲ್ಲ ದಾಖಲೆಗಳು ನಮ್ಮಲ್ಲಿವೆ. ಅದರ ಆಧಾರದಲ್ಲಿ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಕೋರ್ಟ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ ಹಾಕಲಿದ್ದೇವೆ. ಯಾವುದೇ ಕಾರಣಕ್ಕೂ ಬೀದಿಗಿಳಿದು ಹೋರಾಟ ನಡೆಸುವುದಿಲ್ಲ ಎಂದು ಹೇಳಿದರು.  
ಆಪಾದನೆಗೆ ದಾಖಲೆ ಬೇಕು: ಪ್ರಜಾಪ್ರಭುತ್ವದಲ್ಲಿ ಯಾರ ವಿರುದ್ಧ ಆಪಾದನೆ ಮಾಡುವುದಿದ್ದರೂ ಅದಕ್ಕೆ ಸೂಕ್ತ ದಾಖಲೆ ಬೇಕು. ಅದಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ನೈತಿಕ ಮಾರ್ಗವೂ ಅಲ್ಲ. ಧರ್ಮಸ್ಥಳದ ಯೋಜನೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಮಾಹಿತಿ ಕೇಳಬೇಕೇ ವಿನಃ ವೃಥಾ ಮಾಧ್ಯಮ ಮುಂದೆ ತೇಜೋವಧೆಗೆ ಮುಂದಾಗುವುದು ಆರೋಗ್ಯಕರ ಲಕ್ಷಣವಲ್ಲ ಎಂದರು.
ತಡೆಯಾಜ್ಞೆ ಇದ್ದರೂ ಆರೋಪ: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ವೃಥಾ ಆರೋಪ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದ್ದರೂ ಕೆಲವರು ಅದನ್ನೇ ಮುಂದುವರಿಸಿ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ. ವಿನಾ ಕಾರಣ ಧರ್ಮಾಧಿಕಾರಿ ಮತ್ತು ಕ್ಷೇತ್ರದ ವಿರುದ್ಧ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿದೆ. ಸೌಜನ್ಯಾ ಹತ್ಯಾಚಾರ ಪ್ರಕರಣವನ್ನು ನಾವು ಖಂಡಿಸುತ್ತಿದ್ದು, ಸಿಐಡಿ ವರದಿಯಲ್ಲಿ ಧರ್ಮಾಧಿಕಾರಿ ಕುಟುಂಬದ ಪಾತ್ರ ಇಲ್ಲ ಎಂದು ಸ್ಪಷ್ಟಗೊಂಡಿದೆ. ಅಗತ್ಯವಾದರೆ ಸಿಬಿಐ ತನಿಖೆಗೆ ಸಮ್ಮತಿಸುತ್ತೇವೆ. ಆದರೂ ಕೆಲವರು ಧರ್ಮಾಧಿಕಾರಿಗಳ ಹಾಗೂ ಕ್ಷೇತ್ರದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಸಹಿಸಲು ಸಾಧ್ಯವಿಲ್ಲ. ಕಾನೂನು ಹೋರಾಟದಲ್ಲಿ  ಪಾಠ ಕಲಿಸುವುದಾಗಿ ಹೇಳಿದರು. ಎಸ್‌ಡಿಎಂ ಉದ್ಯಮಾಡಳಿತ ಕಾಲೇಜು ನಿರ್ದೇಶಕ ಡಾ.ದೇವರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement