ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಿಬಿಐಗೆ ಒಪ್ಪಿಸುವವರೆಗೆ ವಿರಮಿಸಲಾರೆ: ಬಂಗೇರ

Mainashree
Updated On : 2 Nov 2013, 12:17 pm

ಬೆಳ್ತಂಗಡಿ: ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಧರ್ಮಸ್ಥಳದ ಸೌಜನ್ಯಾ ಕುಟುಂಬಕ್ಕೆ ಸಿಐಡಿ ತನಿಖೆಯಿಂದ ನ್ಯಾಯ ದೊರೆತಿಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವವರೆಗೆ ವಿರಮಿಸಲಾರೆ, ಈ ಬಗ್ಗೆ ಮುಖ್ಯ ಮಂತ್ರಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು ಬೆಂಗಳೂರಿಗೆ ತೆರಳಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಘೋಷಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಐಡಿ ತನಿಖೆ ಒಂದು ಪ್ರಹಸನವಾಗಿದೆ. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಅವರನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕಾದ ಅಗತ್ಯವಿದೆ. ಇಡಿ ಪ್ರಕರಣವನ್ನು ಅವರೇ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದ ಬಂಗೇರ, ತಾಲೂಕಿನಲ್ಲಿ ಎಲ್ಲರೂ ನಿರ್ಭೀತಿಯಿಂದ ನೆಮ್ಮದಿಯಿಂದ ಬಾಳುವ ಪರಿಸ್ಥಿತಿ ನಿರ್ಮಾಣವಾಗಬೇಕು ಅದಕ್ಕಾಗಿ ಪ್ರಯತ್ನಿಸುತ್ತೇನೆ ಎಂದರು.
ಮಾತೃಭಾಷೆ ಅಭಿಮಾನವಿರಲಿ: ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಡಂತ್ಯಾರು ಕಾಲೇಜಿನ ಉಪನ್ಯಾಸಕ ಬಿ. ಮಧುಕರ ಮಲ್ಯ ಮಾತನಾಡಿ ಮಾತೃಭಾಷೆಯ ಮೇಲೆ ಅಭಿಮಾನವಿರಲಿ. ಅದನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದರು. ಸೌಜನ್ಯಾ ಪರವಾಗಿ ಇಂದು ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ ನ್ಯಾಯ ಕೇಳುವ ಈ ಹೋರಾಟಕ್ಕೆ ಬೆಂಬಲವಿದೆ ಎಂದರು.
ತಹಸೀಲ್ದಾರ್ ಸಿ.ಆರ್. ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ನಗರ ಪಂಚಾಯಿತಿ ಅಧ್ಯಕ್ಷೆ ಮುಸ್ತಾರ್ಜಾನ್ ಮೆಹಬೂಬ್, ಉಪಾಧ್ಯಕ್ಷೆ ನಳಿನಿ, ತಾಪಂ ಸದಸ್ಯ ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement