ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸೌಜನ್ಯಾ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ:ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿಭಟನೆ

Mainashree
Updated On : 2 Nov 2013, 12:17 pm

ಬೆಳ್ತಂಗಡಿ/ಮಂಗಳೂರು: ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ, ಸಿಐಡಿ ವರದಿಯನ್ನು ವಿರೋಧಿಸಿ ಮಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ಶುಕ್ರವಾರ, ರಾಜ್ಯೋತ್ಸವ ಸಮಾರಂಭಗಳಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆದವು.
ಬೆಳ್ತಂಗಡಿಯಲ್ಲಿ ಜನವಾದಿ ಮಹಿಳಾ ಸಂಘಟನೆ (ಜೆ.ಎಂ.ಎಸ್.) ಹಾಗೂ ಡಿವೈಎಫ್‌ಐ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಪ್ಪು ಬಾವುಟ ಪ್ರದರ್ಶಿಸಿ ಪೊಲೀಸರಿಂದ ಬಂಧನಕ್ಕೊಳಗಾದರು.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಐಡಿ ನೀಡಿರುವ ತನಿಖಾ ವರದಿ ಅತ್ಯಂತ ಬಾಲಿಶ ಎಂದು ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಎಂಎಸ್ ಮುಖಂಡೆ ಪ್ರಭಾ, ನ್ಯಾಯಕ್ಕಾಗಿನ ಈ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ. ಸಿಐಡಿ ವರದಿ ಬೆಂಕಿಗೆ ಹಾಕಿ ಪ್ರಕರಣದ ಸಿಬಿಐ ತನಿಖೆಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ನ. 7ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಸೌಜನ್ಯಾ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು. ಸೌಜನ್ಯಾ ಪ್ರಕರಣದೊಂದಿಗೆ ಧರ್ಮಸ್ಥಳ ಪರಿಸರದಲ್ಲಿ ನಡೆದಿರುವ ಇತರ ಕೊಲೆ ಅಸಹಜ ಸಾವುಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರಿಂದ ಕಟ್ಟು ಕತೆ:  ಪ್ರಕರಮದ ಆರೋಪಿ ಸಂತೋಷ್ ರಾವ್‌ನನ್ನು ಮುಂದಿಟ್ಟುಕೊಂಡು ಪೊಲೀಸರು ಕತೆ ಕಟ್ಟುತ್ತಿದ್ದಾರೆ. ಅವನನ್ನು ಬಿಟ್ಟು ಪ್ರಕರಣದ ಬಗ್ಗೆ ತನಿಖೆ ನಡೆಸಲಿ. ಸಿಐಡಿ ವರದಿಯಲ್ಲಿ ಶಂಕಿತರು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುವುದನ್ನು ಸಾಬೀತು ಪಡಿಸುವುದಕ್ಕೆ ಪ್ರಾಮುಖ್ಯತೆ ದೊರೆತಿದೆಯೆ ಹೊರತು ಕೊಲೆಗಾರರ ಬಗೆಗಿನ ತನಿಖೆಗಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಬಂಧನ: ಬಸ್ ನಿಲ್ದಾಣದಿಂದ ಕಾರ್ಯಕ್ರಮ ನಡೆಯುತ್ತಿದ್ದ ತಾಲೂಕು ಕಚೇರಿಯ ಮೈದಾನಕ್ಕೆ ಕಪ್ಪು ಬಾವುಟ ಪ್ರದರ್ಶಿಸುತ್ತಾ ಬಂದ ಪ್ರತಿಭಟನಾಕಾರರನ್ನು ವೇದಿಕೆಯ ಹೊರಗೆಯೇ ಪೊಲೀಸರು ತಡೆದರು. ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ವಾಹನಗಳಲ್ಲಿ ಅವರನ್ನು ಠಾಣೆಗೆ ಕೊಂಡೊಯ್ದರು. ಬಂಧಿತ ಪ್ರತಿಭಟನಾಕಾರರನ್ನು ಸಭಾಕಾರ್ಯಕ್ರಮದ ಬಳಿಕ ಬಿಡುಗಡೆಗೊಳಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟಣೆಯ ಮುಖಂಡರಾದ ಬಿ.ಎಂ. ಭಟ್, ಶಿವ ಕುಮಾರ್, ಸುಕನ್ಯಾ, ಕಿರಣಪ್ರಭ, ಶೇಖರ ಎಲ್., ಕುಮಾರಿ, ಜಯರಾಮಯ್ಯ, ಶ್ಯಾಮರಾಜ್, ಪ್ರಶಾಂತ್, ಸಂಜೀವ ಆರ್. ಮತ್ತಿತರರು ವಹಿಸಿದ್ದರು.
ಮಂಗಳೂರು ವರದಿ:  ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಲ್ಲಿ ವಿಫಲವಾದ ಸರ್ಕಾರದ ಕ್ರಮವನ್ನು ಖಂಡಿಸಿ ಡಿವೈಎಫ್‌ಐ ಮತ್ತು ಸಮಾನ ಮನಸ್ಕರ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಲು ಪ್ರಯತ್ನಪಟ್ಟರು.
ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಕಪ್ಪು ಧ್ವಜ ಪ್ರದರ್ಶಿಸುತ್ತಾ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು. ಆದರೆ ಇದನ್ನು ತಡೆಯಲು ಮೊದಲೇ ತಯಾರಾಗಿದ್ದ ಪೊಲೀಸರು ಕಮಿಷನರ್ ಕಚೇರಿ ಬಳಿಯೇ ಪ್ರತಿಭಟನಾಕಾರರನ್ನು ತಡೆದು ಅವರನ್ನು ಬಸ್ಸಿನಲ್ಲಿ ಬಂಧಿಸಿ ಕರೆದೊಯ್ದರು.
ಕೆಲವು ಮಹಿಳೆಯರು ರಸ್ತೆಯಲ್ಲಿ ಕುಳಿತು ಮತ್ತು ಮಲಗಿ ಪ್ರತಿರೋಧ ವ್ಯಕ್ತಪಡಿಸಿದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement