8ರಂದು ಕಟೀಲಿನ ಆರನೇ ಯಕ್ಷಗಾನ ಮೇಳ ಸಮರ್ಪಣೆ
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ದೇವಳದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನೂತನ ಆರನೇ ಮೇಳದ ಸಮರ್ಪಣೆ ಹಾಗೂ ಎಲ್ಲಾ ಆರು ಮೇಳಗಳ ಪ್ರಸ್ತುತ ಸಾಲಿನ ತಿರುಗಾಟದ ಆರಂಭೋತ್ಸವ 8ರಂದು ಕಟೀಲಿನ ರಥಬೀದಿಯಲ್ಲಿ ಜರಗಲಿದೆ.
ದೇವಳದಲ್ಲಿ ಯಕ್ಷಗಾನ ಸೇವೆಯು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಂದ ಬರುತ್ತಿದ್ದು, ಈಗಾಗಲೇ ಸುಮಾರು 15ವರ್ಷಗಳ ವರೆಗೆ ಹರಿಕೆ ಬಯಲಾಟಗಳ ಮುಂಗಡ ಬುಕ್ಕಿಂಗ್ ಆಗಿದೆ.
ಭಕ್ತರ ಆಶಯದಂತೆ ಈ ಬಾರಿ ಆರನೇ ಮೇಳ ಆರಂಭಿಸಲಾಗುತ್ತಿದೆ. ಆರನೇ ಮೇಳಕ್ಕೆ ಪೂರಕವಾಗಿ ಭಕ್ತರ ಸಹಕಾರದಿಂದ ಬಸ್, ರಂಗ ಪರಿಕರ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಹಾಗೂ ಕಲಾವಿದರು ಸಿದ್ಧಗೊಂಡಿದೆ.
ಬೇಗನೆ ತಿರುಗಾಟ: ಈ ಹಿಂದೆ ದೀಪೋತ್ಸವದ ಬಳಿಕ ಮೇಳಗಳು ತಿರುಗಾಟ ಆರಂಭಿಸುತ್ತಿದ್ದು, ಈ ಬಾರಿ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದುಬಂದಂತೆ ದೇವರ ಒಪ್ಪಿಗೆ ಪಡೆದು ದೀಪೋತ್ಸವಕ್ಕಿಂತ 20 ದಿನ ಮೊದಲು ತಿರುಗಾಟ ಆರಂಭಿಸಲಾಗುತ್ತಿದೆ. 8ರಂದು ಕಟೀಲಿನ ರಥಬೀದಿಯಲ್ಲಿ ಏಕ ಕಾಲದಲ್ಲಿ ಆರು ಮೇಳಗಳು ಒಂದೇ ಸ್ಥಳದಲ್ಲಿ ಆರು ರಂಗಸ್ಥಳದಲ್ಲಿ ಪ್ರದರ್ಶನ ನೀಡುವ ಮೂಲಕ ತಿರುಗಾಟ ಆರಂಭಗೊಳ್ಳಲಿದೆ.
ಮೊಯ್ಲಿ ಉದ್ಘಾಟನೆ: ಸಂಜೆ ಜರಗಲಿರುವ ಆರನೇ ಮೇಳದ ಸಮರ್ಪಣೆ ಹಾಗೂ ಪ್ರಸ್ತುತ ಸಾಲಿನ ಎಲ್ಲಾ ಆರು ಮೇಳಗಳ ತಿರುಗಾಟ ಕಾರ್ಯಕ್ರಮವನ್ನು ಕೇಂದ್ರ ಇಂಧನ ಸಚಿವ ವೀರಪ್ಪ ಮೈಲಿ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ.
ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ದೇವಳದ ಆಡಳಿತಾಧಿತಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಮೇಳದ ವ್ಯವಸ್ಥಾಪಕ ಕೆ. ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.