ನಾಳೆ ' ದೂರ ಸಂಪರ್ಕ ಗ್ರಾಹಕರ ಹಕ್ಕು, ಸವಲತ್ತು' ಮಾಹಿತಿ ಕಾರ್ಯಾಗಾರ
ಉಡುಪಿ: ಟ್ರಾಯ್ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಇದರ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ವತಿಯಿಂದ ದೂರ ಸಂಪರ್ಕ ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 6ರಂದು ಅಪರಾಹ್ನ 2.30 ಗಂಟೆಗೆ ಹೊಟೇಲ್ ಕಿದಿಯೂರಿನ ಮಾಧವಕೃಷ್ಣ ಹಾಲ್‌ನಲ್ಲಿ ಗ್ರಾಹಕರ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಟ್ರಾಯ್ (ಕರ್ನಾಟಕ- ಕೇರಳ) ಪ್ರಾದೇಶಿಕ ಮುಖ್ಯಸ್ಥ ಡಾ. ಸಿಬಿಚಿನ್ ಕೆ. ಮ್ಯಾಥ್ಯೂ ಅವರು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಟ್ರಾಯ್ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ, ಗ್ರಾಹಕರ ಹಕ್ಕು, ಸೌಲಭ್ಯ, ಸೇವಾ ಸಂಸ್ಥೆಗಳು, ಸೆಲ್ ಫೋನ್, ಲ್ಯಾಂಡ್ ಫೋನ್, ಕೇಬಲ್ ಟಿವಿ ನಿಯಮ, ಸ್ಥಿರ ದೂರವಾಣಿ ಕುರಿತು ಮಾಹಿತಿ ನೀಡುವರು. ಟ್ರಾಯ್ ಎಲ್ಲಾ ಕೇಬಲ್ ಚಂದಾದಾರರಿಗೆ ಡಿಜಿಟಲ್ ಸೆಟ್‌ಬಾಕ್ಸ್ ಕಡ್ಡಾಯಗೊಳಿಸಿದೆ. ಇದರ ಲಾಭಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು. ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಂಶೋಧನಾ ಅಧಿಕಾರಿ ಲತಾ ಎಚ್.ಸಿ. ಅವರನ್ನು, ದೂ. 9449850060 ಸಂಪರ್ಕಿಸಬಹುದು.
ಗಾಯಗೊಂಡಿದ್ದ ಕರು ಗೋಶಾಲೆಗೆ
ಉಡುಪಿ: ನಗರದ ಪೂರ್ಣಪ್ರಜ್ಞ ಕಾಲೇಜಿನ ಸಮೀಪ ಗಾಯಗೊಂಡು ಬಿದ್ದಿದ್ದ ಸಣ್ಣ ಕರುವನ್ನು ಪಶುವೈದ್ಯ ಡಾ. ಪ್ರಶಾಂತ್ ಅವರಿಂದ ಚಿಕಿತ್ಸೆ ಕೊಡಿಸಿದ ನಗರಸಭೆಯ ಮೋಹನ್ ದಾಸ್ ಮತ್ತವರ ಸಿಬ್ಬಂದಿಯವರಿಂದ ಕರುವನ್ನು ಕೊಡವೂರಿನ ಗೋಶಾಲೆಗೆ ಉಡುಪಿ ಜಿಲ್ಲಾ ನಾಗರಿಕರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ರವಾನಿಸಿದರು.
ಬಂಟಕಲ್ಲು: ಸಾಮೂಹಿಕ ವಾಹನ ಪೂಜೆ
ಉಡುಪಿ: ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಸೋಮವಾರ ಸಾರ್ವಜನಿಕ ಸಾಮೂಹಿಕ ವಾಹನ ಪೂಜೆ ಕಾರ್ಯಕ್ರಮ ನಡೆಯಿತು. ಶ್ರೀಕ್ಷೇತ್ರದ ಅರ್ಚಕ ಬಿ. ಶ್ರೀಕಾಂತ ಭಟ್ ಪೂಜೆ ನೆರವೇರಿಸಿದರು.
ಬಿ. ರಮಾನಂದ ಮರಾಠೆ ಸಹಕರಿಸಿದರು. ರಾಜಾಪುರ ಸಾರಸ್ವತ ಯುವ ವೃಂದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಅಡಳಿತ ಮಂಡಳಿ ಅಧ್ಯಕ್ಷ ಸಡಂಬೈಲು ಶಶಿಧರ ವಾಗ್ಳೆ, ಆಡಳಿತ ಮಂಡಳಿ ಸದಸ್ಯರಾದ ದೇವದಾಸ ಪಾಟ್ಕರ್ ಮುದರಂಗಡಿ, ಉಮೇಶ ಪ್ರಭು ಪಾಲಮೆ, ಯುವ ವೃಂದ ಅಧ್ಯಕ್ಷ ಅನಂತರಾಮ ವಾಗ್ಳೆ, ನಿಕಟ ಪೂರ್ವಾಧ್ಯಕ್ಷ ಕೆ.ಆರ್. ಪಾಟ್ಕರ್, ಕಾರ್ಯದರ್ಶಿ ಅಮೃತ್ ನಾಯಕ್, ನಿಕಟಪೂರ್ವ ಕಾರ್ಯದರ್ಶಿ ಉಮೇಶ ಪಾಟ್ಕರ್ ಭಾಗವಹಿಸಿದ್ದರು. 40ಕ್ಕೂ ಅಧಿಕ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ಮಟ್ಟಾರು: ಸಾಮೂಹಿಕ ಗೋಪೂಜೆ
ಉಡುಪಿ: ಶಿರ್ವ ಸಮೀಪದ ಮಟ್ಟಾರಿನಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ಸಾಮೂಹಿಕ ಗೋಪೂಜೆ ಮತ್ತು ಸಾಮೂಹಿಕ ವಾಹನ ಪೂಜೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಮಾಣಿಬೆಟ್ಟು ಶ್ರೀಮಹಾಲಿಂಗೇಶ್ವರ ದೇವಳ ಆರ್ಚಕ ವೇದಮೂರ್ತಿ ವಿಷ್ಣುಮೂರ್ತಿ ಉಪಾಧ್ಯಾಯ ಪೂಜಾ ವಿಧಾನಗಳನ್ನು ನೆರವೇರಿಸಿದರು. ಗ್ರಾಮಸ್ಥರ ಸುಮಾರು 12 ಗೋವುಗಳು ಮತ್ತು 25ಕ್ಕೂ ಅಧಿಕ ವಾಹನಗಳು ಈ ಸಂದರ್ಭ ಪೂಜಿಸಲ್ಪಟ್ಟವು.
ಮಟ್ಟಾರಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಟ್ಟಾರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಮೇಶ ಪ್ರಭು, ಭಜರಂಗದಳ ಸಂಚಾಲಕ ಜಯಪ್ರಕಾಶ ಪ್ರಭು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.12 ಅಡಿ ಎತ್ತರದ ಗೂಡುದೀಪ ವಿಶೇಷ ಆಕರ್ಷಣೆಯಾಗಿತ್ತು.
ವಿಶೇಷ ಜಾಗೃತಿ ಜಾಥಾ
ಉಡುಪಿ: ದ.ಕ. ಜಿಲ್ಲಾ ಛಾಯಾಚಿತ್ರ ಗ್ರಾಹಕರ ಸಂಘ ಉಡುಪಿ ವಲಯದ ವತಿಯಿಂದ ಸುಡುಮದ್ದುಗಳ ಬಗ್ಗೆ ಅರಿವು ವಿಶೇಷ ಜಾಗೃತಿ ಜಾಥಾವೊಂದನ್ನು ನಗರದಲ್ಲಿ ಆಯೋಜಿಸಲಾಗಿತ್ತು. ಜಾಥಾಕ್ಕೆ ಸಂಘದ ಮಾತೃ ಸಂಸ್ಥೆ ಅಧ್ಯಕ್ಷ ಕೆ. ವಾಸುದೇವ ರಾವ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ, ಉಡುಪಿ ವಲಯದ ಅಧ್ಯಕ್ಷ ಸುಂದರ್ ಪೂಜಾರಿ, ಕಾರ್ಯದರ್ಶಿ ಸಬಾಸ್ಟಿನ್, ಶಿವ ಕೆ. ಅಮೀನ್, ದಾಮೋದರ್, ಯು .ಕೆ. ಭಾಸ್ಕರ್, ಪಿ. ಲಕ್ಷ್ಮಿನಾರಾಯಣ್, ಸುರಭಿ ರತನ್, ಮಂಜುನಾಥ ದೇವಾಡಿಗ ಇದ್ದರು.
31ರಂದು ಕೋಟ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ
ಬಾರ್ಕೂರು: ಇಲ್ಲಿನ ನೇಷನಲ್ ಪ.ಪೂ. ಕಾಲೇಜಿನಲ್ಲಿ 31ರಂದು ಕೋಟ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಿವೃತ್ತ ಅಧ್ಯಾಪಕ, ಸಾಹಿತಿ ವಿಠಲ ವಿ. ಗಾಂವ್ಕರ್ ಅವರು ಸಮ್ಮೇಳನಾಧ್ಯಕ್ಷರಾಗಿರುತ್ತಾರೆ. ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಆಡಿಗ ಆಶಯ ಭಾಷಣ ಮಾಡಲಿದ್ದಾರೆ. ಜೀವನದಲ್ಲಿ ಹಾಸ್ಯದ ಕುರಿತು ಎಚ್. ಶ್ರೀಧರ ಹಂದೆ, ಬಾರ್ಕೂರು ಅಂದು- ಇಂದು ಕುರಿತು ಡಾ. ಉದಯ ಬಾರ್ಕೂರು, ಬದಲಾಗುತ್ತಿರುವ ಗ್ರಾಮೀಣ ಸಂಸ್ಕೃತಿ ಕುರಿತು ನಾಗರತ್ನ ಅವರು ಪ್ರಬಂಧ ಮಂಡನೆ ಮಾಡಲಿದ್ದಾರೆ. ಶಿಕ್ಷಕ ನರೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಕೋಟ ಹೋಬಳಿ ಕಸಾಪ ಅಧ್ಯಕ್ಷ ಎಚ್. ಸುದರ್ಶನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಕೂರಾಡಿ ಸದಾಶಿವ ಕಲ್ಕೂರ ಅವರನ್ನು ಸಮ್ಮಾನಿಸಲಾಗುವುದು. ಉಪನ್ಯಾಸಕ ರಾಮ ಭಟ್ ಸಜಂಗದ್ದೆ ಅವರು ಸಮಾರೋಪ ಭಾಷಣಗೈಯಲಿದ್ದಾರೆ.
7ರಂದು ವಿದ್ಯುತ್ ವ್ಯತ್ಯಯ
ಉಡುಪಿ: ಬ್ರಹ್ಮಾವರ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 7ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಬ್ರಹ್ಮಾವರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಎನ್‌ಜಿಸಿ ಸಮಿತಿಗೆ ಪ್ಲೋರಾ- ಫೌನಾ ಕ್ಲಬ್ ಆಯ್ಕೆ
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಪ್ರಕೃತಿ ಮತ್ತು ಪರಿಸರ ಪ್ರೇಮಿಗಳ ಸಂಘಟನೆ ಪ್ಲೋರಾ ಮತ್ತು ಫೌನಾ ಕ್ಲಬ್ ಉಡುಪಿ ಜಿಲ್ಲೆಯ ನ್ಯಾಷನಲ್ ಗ್ರೀನ್ ಕಾರ್ಪ್ (ಎನ್.ಜಿ.ಸಿ.) ಆಂದೋಲನದ ಸಲಹಾ ಸಮಿತಿಗೆ ಎನ್.ಜಿ.ಓ. ಸಂಸ್ಥೆಯಾಗಿ ಆಯ್ಕೆಯಾಗಿದೆ.
ಎನ್.ಜಿ.ಸಿ. ಎನ್ನುವುದು ರಾಷ್ಟ್ರೀಯ ಯೋಜನೆಯಾಗಿದ್ದು, ದೇಶವನ್ನು ಹಸಿರಾಗಿಸುವ ಸಲುವಾಗಿ ಶಾಲಾ ಮಕ್ಕಳಲ್ಲಿ ಇಕೋ ಕ್ಲಬ್‌ಗಳ ಮೂಲಕ ಪ್ರಜ್ಞೆ ಮೂಡಿಸುವುದು ಇದರ ಗುರಿ. ಪ್ಲೋರಾ ಮತ್ತು ಫೌನಾ ಕ್ಲಬ್ ಕಳೆದ 8 ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.