ಪುತ್ತೂರು: ತಣ್ಣಗಾದ ಬೆಂದ್ರ್ತೀರ್ಥ
ಪುತ್ತೂರು: ತಾಲೂಕಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿದ್ದು, ಇಲ್ಲಿನ ಡಾ. ಶಿವರಾಮ ಕಾರಂತರ ಬಾಲವನ, ಬೆಂದ್ರ ತೀರ್ಥ, ಬೀರಮಲೆ ಬೆಟ್ಟ, ಕೋಟಿ ಚೆನ್ನಯರ ಪಡುಮಲೆ ಮತ್ತಿತರ ಸ್ಥಳಗಳು ತನ್ನದೇ ಆದ ಹಿರಿಮೆ ಗರಿಮೆಗಳ ಮೂಲಕ ಒಂದೊಮ್ಮೆ ಸಹಸ್ರಾರು ಪ್ರವಾಸಿಗರನ್ನು ತನ್ನ ಬಳಿಗೆ ಸೆಳೆದುಕೊಂಡಿರುವ ಪ್ರವಾಸಿ ತಾಣಗಳು.
ಈ ಪೈಕಿ ಕೆಲವು ಸ್ಥಳಗಳು ತನ್ನ ಗತ ವೈಭವಗಳನ್ನು ಕಳೆದುಕೊಂಡು ವಿನಾಶದಲ್ಲಿದ್ದರೆ ಇನ್ನಿತರ ಸ್ಥಳಗಳು ಬಾಲಗ್ರಹ ಪೀಡಿತವಾಗಿ ನರಳುತ್ತಿವೆ.
ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥವು ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಕೊಳ ಎಂಬ ಪ್ರಸಿದ್ಧಿಗೆ ಪಾತ್ರವಾಗಿತ್ತು. ಹಿಂದೆಲ್ಲಾ ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಈ ಬಿಸಿನೀರಿನ ಕೊಳ ಕೇವಲ ಪ್ರವಾಸಿಗರು ಮಾತ್ರವಲ್ಲದೆ ಇತಿಹಾಸಗಾರರು, ವಿಜ್ಞಾನಿಗಳು, ಸಂಶೋಧಕರನ್ನೂ ತನ್ನತ್ತ ಸೆಳೆದಿತ್ತು. ಆದರೆ ಇದೀಗ ಈ ಬಿಸಿನೀರಿನ ಕೊಳ ಹಿಂದಿನ ತನ್ನೆಲ್ಲಾ ಆಕರ್ಷಣೆ ಕಳೆದುಕೊಂಡು ನೆನಪಾಗಿ ಮಾತ್ರ ಉಳಿದುಕೊಂಡಿದೆ.
ಕಾರಂತರದ ಕಾದಂಬರಿಯಲ್ಲಿ ಉಲ್ಲೇಖ: ತುಳುವಿನಲ್ಲಿ ಬೆಂದ್ರ್ ಎಂದರೆ ಬಿಸಿ ಎಂದರ್ಥ. ಹಾಗಾಗಿ ಇದಕ್ಕೆ ಬೆಂದ್ರ್ ತೀರ್ಥ ಎಂಬ ಹೆಸರು ಬಂದಿದೆ.
ಕಡಲ ತಡಿಯ ಭಾರ್ಗವ ಡಾ. ಶಿವರಾಮ ಕಾರಂತರ ಕರುಳಿನ ಕರೆ ಕಾದಂಬರಿಯಲ್ಲಿ ಈ ಬಿಸಿ ನೀರಿನ ಚಿಲುಮೆ ಸ್ಥಾನ ಪಡೆದು ಈ ಮೂಲಕ ಹೊರಲೋಕಕ್ಕೆ ಹೆಚ್ಚು ಪರಿಚಿತವಾಗಿತ್ತು ಎನ್ನಲಾದ ಬೆಂದ್ರ್ ತೀರ್ಥ ಕಾರಂತರು ಗತರಾಗುವುದರೊಂದಿಗೆ ತನ್ನ ಗತ ವೈಭವ ಕಳೆದುಕೊಂಡಿತು ಎಂದರೂ ತಪ್ಪಾಗಲಾರದು.
ಇಲ್ಲಿನ ಸೀರೆ ಹೊಳೆಯ ಪಕ್ಕದಲ್ಲಿಯೇ ಈ ಬಿಸಿನೀರಿನ ಕುಂಡವಿದ್ದು ಸರ್ಕಾರವು ಸೀರೆ ಹೊಳೆಗೆ ಬೆಂದ್ರ್ ತೀರ್ಥವಿರುವ ಸ್ಥಳದಿಂದ ಕೆಳ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿತು. ಇದರಿಂದಾಗಿ ಹೊಳೆಯಲ್ಲಿ ನೀರು ತುಂಬಿದಾಗ ಬಿಸಿನೀರಿನ ಕೊಳದಿಂದ ಎತ್ತರದ ಮಟ್ಟದಲ್ಲಿ ನೀರು ನಿಂತ ಕಾರಣ ಹೊಳೆಯ ತಣ್ಣೀರು ಮತ್ತು ಬೆಂದ್ರ್ ತೀರ್ಥದ ಬಿಸಿನೀರಿನ ನಡುವೆ ಪೈಪೋಟಿ ಉಂಟಾಗಿ ಈ ಬಿಸಿ ನೀರ ಕಾರಂಜಿ ತನ್ನ ಉಷ್ಣ ಕಳೆದುಕೊಳ್ಳುವುದರೊಂದಿಗೆ ತಣ್ಣಗಾಯಿತು. ಬಳಿಕ ಕೊಳದ ಬಳಿಯಲ್ಲಿನ ಅಡಕೆ ತೋಟದಲ್ಲಿ ನೀರಿನ ವ್ಯವಸ್ಥೆಗಾಗಿ ಖಾಸಗಿ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆಸಿ ಪಂಪು ಅಳವಡಿಸಿದ ಕಾರಣ ಒರತೆ ನಿಂತು ಬಿಸಿನೀರಿನ ಕೊಳ ಸಂಪೂರ್ಣ ಬತ್ತಿ ಹೋಗಿ ಜನಾಕರ್ಷಣೆಯನ್ನು ಕಳೆದುಕೊಂಡಿತು ಎಂಬುದು ಸ್ಥಳೀಯರ ಅಭಿಪ್ರಾಯ.
ಬೆಂದ್ರ್ ತೀರ್ಥವು ಆಸ್ತಿಕರಿಗೆ ಪೂಜನೀಯ ಕೊಳವಾಗಿದೆ. ಗಂಧಕದ ವಾಸನೆಯಿರುವ ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿತ್ತು.
ಚರ್ಮವ್ಯಾಧಿ ನಿವಾರಣೆ: ವೈಜ್ಞಾನಿಕವಾಗಿಯೂ ಇಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿದ್ದು ವಿಜ್ಞಾನಿಗಳು ನೀಡಿದ ವಿವರದಂತೆ ಈ ಕೊಳದಲ್ಲಿನ ನೀರು ಕ್ಲೋರೈಡ್, ಕಾರ್ಬೋನೇಟ್, ಕ್ಯಾಲ್ಸಿಯಂ ಮತ್ತಿತರ ಅಂಶಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ನೀರಿನಿಂದ ತುರಿಕೆಯಂತಹ ಚರ್ಮ ರೋಗಗಳು ವಾಸಿಯಾಗುತ್ತಿತ್ತು ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿರುವ ಈ ಬಿಸಿನೀರ ಚಿಲುಮೆಯನ್ನು 1983ರಲ್ಲಿ ಪ್ರವಾಸೋದ್ಯಮ ಇಲಾಖೆ ದುರಸ್ತಿ ಪಡಿಸಿತ್ತು. ಈ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲೆಂದು ವಿಶ್ರಾಂತಿ ಕಟ್ಟಡ ಮತ್ತು ಸ್ನಾನ ಮಾಡಲೆಂದು ವಸ್ತ್ರ ಬದಲಿಸುವ ಕೊಠಡಿಯನ್ನು ನಿರ್ಮಿಸಿತ್ತು. ಬಳಿಕ ಇದನ್ನು ಕೇಳುವವರೇ ಇಲ್ಲದಂತಹ ಸ್ಥಿತಿಯುಂಟಾಗಿದೆ.
ಈ ಮೂಲಕ ಸಾವಿರಾರು ಮಂದಿಯ ಆಕರ್ಷಣೆಯ ಬಿಂದುವಾಗಿದ್ದ ಬೆಂದ್ರ್ ತೀರ್ಥ ತನ್ನ ಪ್ರಸಿದ್ಧಿ ಕಳೆದುಕೊಂಡು ವಿನಾಶದಂಚಿಗೆ ತಲುಪಿದೆ. ಬೆಂದ್ರ್ ತೀರ್ಥಕ್ಕೆ ಕಾಯಕಲ್ಪ ನೀಡಿ ಮತ್ತೆ ಅದರ ಗತ ವೈಭವ ಕಾಣಲು ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಬೆಟ್ಟವಿದೆ ಆದರೆ ಹತ್ತಲು ದಾರಿಯೇ ಸರಿಯಿಲ್ಲ: ಪುತ್ತೂರಿನ ಇನ್ನೊಂದು ಪ್ರೇಕ್ಷಣೀಯ ಸ್ಥಳ ಬೀರಮಲೆ ಬೆಟ್ಟ. ಈ ಬೆಟ್ಟದ ತುತ್ತ ತುದಿಗೆ ಹತ್ತಿ ಅಲ್ಲಿಂದ ಪುತ್ತೂರು ನಗರವನ್ನು ನೋಡಿದಾಗ ಸಿಗುವ ಸೊಬಗು ಹೇಳತೀರದು. ಬೀರಮಲೆ ಬೆಟ್ಟವನ್ನು ಜನಾಕರ್ಷಣೆಯ ಬೆಟ್ಟವಾಗಿ ರೂಪುಗೊಳಿಸಲು ಹಲವರು ಸಾಕಷ್ಟು ಶ್ರಮ ವಹಿಸಿದ್ದಾರೆ.
ಬೀರಮಲೆ ಬೆಟ್ಟದ ಅಭಿವೃದ್ಧಿಯ ಚಿಂತನೆಯ ರೂವಾರಿಗಳು ಬೆಟ್ಟದ ಬುಡದಿಂದ ಆರಂಭಗೊಂಡು ತುದಿಯ ತನಕ ಹಲವಾರು ವ್ಯವಸ್ಥೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಬೀರಮಲೆ ಬೆಟ್ಟ ಸಂಪರ್ಕಿಸುವ ದಾರಿ ಮಾತ್ರ ನರಕ ಸದೃಶವಾಗಿದೆ. ಇಲ್ಲಿನ ಬೈಪಾಸ್ ರಸ್ತೆಯಿಂದ ಸಂಪರ್ಕ ಪಡೆಯುವ ಬೀರಮಲೆ ಬೆಟ್ಟಕ್ಕೆ ಹೋಗುವ ರಸ್ತೆಯ ಸ್ಥಿತಿ ತೀರಾ ಹದೆಗೆಟ್ಟಿದೆ. ಮುಖ್ಯರಸ್ತೆಯಿಂದ ಬೆಟ್ಟದ ರಸ್ತೆಯು ಸುಮಾರು 200 ಮೀಟರ್ ದೂರದ ತನಕ ಕಾಂಕ್ರೀಟ್ಗೊಂಡಿದ್ದು ಮುಂದಿನ ಭಾಗದ ರಸ್ತೆ ಡಾಂಬರು ಕಾಣದೆ ವರ್ಷ ಹಲವಾರು ಕಳೆದಿದೆ.
ಈ ರಸ್ತೆಯಲ್ಲಿ ವಾಹನ ಸಂಚಾರದ ಮಾತು ಬಿಡಿ ನಡೆದಾಡಲೂ ಕಷ್ಟಕರವಾದ ಸ್ಥಿತಿಯಿದೆ. ಪುತ್ತೂರು ನಗರದ ಸೊಬಗಿಗೆ ಮುಕುಟಮಣಿಯಾದ ಬೀರಮಲೆ ಬೆಟ್ಟಕ್ಕೆ ಹೋಗುವ ರಸ್ತೆ ಆಗಬೇಕಾಗಿದೆ ದುರಸ್ತಿ.
-ಸಂಶುದ್ದೀನ್ ಸಂಪ್ಯ