ಚಿಟ್ಟಾಣಿ ಯಕ್ಷಗಾನ ಸಪ್ತಾಹ ಚಾಲನೆ
ಉಡುಪಿ: ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ವತಿಯಿಂದ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಶ್ರೀಕಷ್ಣ ಮಠದ ರಾಜಾಂಗಣದಲ್ಲಿ ಚಿಟ್ಟಾಣಿ ಯಕ್ಷಗಾನ ಸಪ್ತಾಹ ಮಂಗಳವಾರ ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ಪರ್ಯಾಯ ಶ್ರೀ ವಿಶ್ವವಲ್ಲಭ ತೀರ್ಥರು ಉದ್ಘಾಟಿಸಿ, ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಯಕ್ಷಗಾನ ಗಂಡು ಮೆಟ್ಟಿದ ಕಲೆ ಎಂಬುದನ್ನು ತಮ್ಮ 80 ವರ್ಷ ವಯಸ್ಸಿನಲ್ಲಿಯೂ ಚಿಟ್ಟಾಣಿ ರಾಮಚಂದ್ರ ಹೆಗಡೆ ಯುವಕರಂತೆ ಹಮ್ಮಸ್ಸಿನಿಂದ ರಂಗಸ್ಥಳದಲ್ಲಿ ಕುಣಿದು ಸಾಬೀತು ಮಾಡುತ್ತಿದ್ದಾರೆ. ಯಕ್ಷಗಾನ ರಂಗಕ್ಕೇ ಅವರು ಸ್ಪೂರ್ತಿ ಎಂದರು.
ವೇಷಭೂಷಣ ಕೊಡುಗೆ: ಈ ಸಂದರ್ಭ ಚಿಟ್ಟಾಣಿ ಅಭಿಮಾನಿ ಬಳಗದ ವತಿಯಿಂದ ಯಕ್ಷಗಾನದ ಸಂಪೂರ್ಣ ವೇಷಭೂಷಣವನ್ನು ಚಿಟ್ಟಾಣಿಗೆ ಕೊಡುಗೆಯಾಗಿ ನೀಡಲಾಯಿತು.
ಅದನ್ನು ಸ್ವೀಕರಿಸಿ ಮಾತನಾಡಿದ ಚಿಟ್ಟಾಣಿ, ಉಡುಪಿಯಲ್ಲಿ ಕಲೆಗೆ ತಕ್ಕ ಬೆಲೆಯಿದೆ, ನೆಲೆಯೂ ಇದೆ. ಅಭಿಮಾನಿಗಳಿದ್ದರೆ ಕಲಾವಿದ ಬೆಳೆಯುತ್ತಾನೆ. ನನಗೆ ಅಭಿಮಾನಿಗಳು ಸಿಕ್ಕಿದ್ದಾರೆ, ಆದ್ದರಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ಅಭಿಮಾನಿಗಳ ಈ ಕೊಡುಗೆಯಿಂದ ತನ್ನ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಪಿ. ನಾರಾಯಣ ಭಟ್ ಇದ್ದರು.
ಚಿಟ್ಟಾಣಿ ಅಭಿಮಾನಿ ಬಳಗದ ಸಂಚಾಲಕ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಿಕೃಷ್ಣ ರಾವ್ ವಂದಿಸಿದರು. ಎಂ. ನಾರಾಯಣ ಹೆಗಡೆ ನಿರೂಪಿಸಿದರು. ಬಳಿಕ ಬಂಗಾರಮಕ್ಕಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಚಿಟ್ಟಾಣಿ ಪ್ರಮುಖ ಪಾತ್ರ ವಹಿಸಿದ್ದ 'ಮಾಗಧ ವಧೆ ' ಪ್ರದರ್ಶನಗೊಂಡಿತು.
--