ಮೊಬೈಲ್ ಬಳಕೆ ಭಾರತಕ್ಕೆ ವಿಶ್ವದಲ್ಲಿ 2ನೇ ಸ್ಥಾನ: ಮ್ಯಾಥ್ಯು
ಉಡುಪಿ: ಭಾರತ ಮೊಬೈಲ್ ಬಳಕೆಯಲ್ಲಿ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ. 2004ರಲ್ಲಿ ಕೇವಲ ಶೇ. 7ರಷ್ಟು ಜನರು ಮೊಬೈಲ್ ಬಳಸುತ್ತಿದ್ದರು, ಪ್ರಸ್ತುತ ಶೇ.74 ಹೆಚ್ಚಾಗಿದೆ ಎಂದು ಭಾರತೀಯ ದೂರವಾಣಿ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್)ನ ಕರ್ನಾಟಕ- ಕೇರಳ ಪ್ರಾದೇಶಿಕ ಮುಖ್ಯಸ್ಥ ಸಿಬಿಚೆನ್ ಕೆ. ಮ್ಯಾಥ್ಯೂ ತಿಳಿಸಿದ್ದಾರೆ.
ಅವರು ಬುಧವಾರ ಉಡುಪಿಯಲ್ಲಿ ಟ್ರಾಯ್ನ ಬೆಂಗಳೂರು ಪ್ರಾದೇಶಿಕ ಕಚೇರಿ ವತಿಯಿಂದ ನಡೆದ ಟೆಲಿಕಾಂ ಹಾಗೂ ಕೇಬಲ್ ಗ್ರಾಹಕರ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿರುವ 124 ಕೋಟಿ ಜನಸಂಖ್ಯೆಯಲ್ಲಿ ಶೇ.50 ಜನರು ಇನ್ನೂ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ, ಆದರೆ ಶೇ. 90 ಜನರು ಮೊಬೈಲ್ ಬಳಸುತ್ತಿದ್ದಾರೆ, ಇದು ಅಚ್ಚರಿಯಾದರೂ ನಿಜ, ದೂರಸಂಪರ್ಕ ಕ್ಷೇತ್ರದಲ್ಲಿ ನಡೆದಿರುವ ಕ್ರಾಂತಿಯಿಂದ ಇದು ಸಾಧ್ಯವಾಗಿದೆ ಎಂದವರು ವಿಶ್ಲೇಷಿಸಿದರು.
ಟ್ರಾಯ್ನ ಮುಖ್ಯ ಉದ್ದೇಶ ದೂರವಾಣಿ- ಕೇಬಲ್ ಗ್ರಾಹಕರ ಹಕ್ಕುಗಳ ಸಂರಕ್ಷಣೆಯಾಗಿದೆ. ಈ ಗ್ರಾಹಕರು ತಮ್ಮ ಹಕ್ಕು ಅಧಿಕಾರಿಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದಿರಬೇಕು. ಕರ್ನಾಟಕದಲ್ಲಿ ಕೇಬಲ್ ಬಳಕೆದಾರರು 2014ರ ಡಿ. 31ರೊಳಗಾಗಿ ಡಿಜಿಟಲ್ ಸೆಟ್ಟಾಪ್ ಬಾಕ್ ಹೊಂದುವುದು ಕಡ್ಡಾಯಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಮ್ಮ ಹಕ್ಕು ಬಾಧ್ಯತೆಯ ಮಾಹಿತಿ ಸಹಾಯಕವಾಗುತ್ತದೆ ಎಂದವರು ಹೇಳಿದರು.
ಸೆಟ್ಟಾಪ್ ಬಾಕ್ಸ್ ಬಳಕೆಯಿಂದ ಟಿವಿ ವೀಕ್ಷಕರ ನಿಖರ ಸಂಖ್ಯೆ ಪತ್ತೆಯಾಗಲಿದೆ, ಟಿವಿಗಳ ಟಿ.ಆರ್.ಪಿ. ರೇಟಿಂಗ್ ಖಚಿತವಾಗಲಿದೆ. ಇಂಟರ್ನೆಟ್ ಬಳಕೆ ಸುಲಭವಾಗಲಿದೆ. ಇವೆಲ್ಲವನ್ನೂ ಗ್ರಾಹಕ ಸ್ನೇಹಿಯನ್ನಾಗಿಸಲು ಟ್ರಾಯ್ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಾಯ್ನ ಪ್ರಾದೇಶಿಕ ಹಿರಿಯ ಸಂಶೋಧನಾ ಅಧಿಕಾರಿಗಳಾದ ಲತಾ ಎಚ್.ಸಿ ಹಾಗೂ ಮುರಳೀಧರ ಕೆ. ಉಪಸ್ಥಿತರಿದ್ದರು.