ಉಡುಪಿ ಜನರ ಹೆಮ್ಮೆಯ ಕಟ್ಟಡ ಕಾಪಾಡುವವರಿಲ್ಲವೇ?
ಉಡುಪಿ: 'ಉಡುಪಿ ಜಿಲ್ಲೆಯಲ್ಲೂ ಸ್ವಾತಂತ್ರ ಹೋರಾಟ ನಡೆದಿತ್ತಾ? ಉಡುಪಿಯವರೂ ಈ ಹೋರಾಟದಲ್ಲಿ ಭಾಗವಹಿಸಿದ್ದರಾ? ಹಾಗಿದ್ದರೆ ಅದಕ್ಕೆ ಪುರಾವೆ ಏನಿದೆ?' ಎಂದು ನಮ್ಮ ಮುಂದಿನ ತಲೆಮಾರು ಕೇಳಿದರೆ ಅವಮಾನದಿಂದ ತಲೆ ತಗ್ಗಿಸುವ ಪರಿಸ್ಥಿತಿ ಸದ್ಯವೇ ಎದುರಾಗಲಿದೆ.
ಯಾಕೆಂದರೆ, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಒಬ್ಬೊಬ್ಬರಾಗಿ ಕಾಲವಶವಾಗುತ್ತಿದ್ದಾರೆ, ಜನರ ನೆನಪಿನಿಂದ ದೂರವಾಗುತ್ತಿದ್ದಾರೆ. ಇನ್ನು ಸ್ವಾತಂತ್ರ್ಯ ಹೋರಾಟದ ಪ್ರತೀಕಗಳಾಗಿದ್ದ ಕೆಲವೇ ಕೆಲವು ಕಟ್ಟಡಗಳು, ಸ್ಮಾರಕಗಳು, ಕುರುಹುಗಳನ್ನು ಅತ್ಯಂತ ನಿರ್ಲಜ್ಜೆ ಮತ್ತು ನಿರ್ಲಕ್ಷ್ಯದಿಂದ ನಾಶ ಮಾಡಲಾಗುತ್ತಿದೆ.
ಜೈಲು, ಸಭಾಂಗಣಕ್ಕೆ ಕುತ್ತು: ಉಡುಪಿ ನಗರದ ಹೃದಯ ಭಾಗದಲ್ಲಿರುವ, ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುತ್ತಿದ್ದ, ಮೃತ್ಯು ದಂಡನೆಯನ್ನು ವಿಧಿಸಲಾಗುತ್ತಿದ್ದ ಜೈಲು ಕಟ್ಟಡ ಇದೀಗ ನಾಶವಾಗುವ ಭೀತಿಯಲ್ಲಿದೆ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಪುರಾವೆಯಾಗಿ ತೋರಿಸಬಹುದಾದ ಜೈಲು ಹಾಗೂ ಈ ಕಟ್ಟಡದ ಪಕ್ಕದಲ್ಲಿಯೇ ಇನ್ನೊಂದು ಹೆಮ್ಮೆಯ ಸಭಾಂಗಣ ಇದೆ. ಅದು ಕರ್ನಾಟಕ ಏಕೀಕರಣದ ಬಗ್ಗೆ ಸಭೆ, ಚರ್ಚೆ, ಸಮಾವೇಶಗಳು ನಡೆಯುತ್ತಿದ್ದ ಪೀಪಲ್ಸ್ ಹಾಲ್ ಅಥವಾ ಜನತಾ ಸಭಾಂಗಣ. ಈ ಜೈಲು ಕಟ್ಟಡ ಮತ್ತು ಜನತಾ ಸಭಾಂಗಣಗಳೆರಡೂ ಜಿಲ್ಲೆಯ ಮಾತ್ರವಲ್ಲ, ರಾಜ್ಯದ ಐತಿಹಾಸಿಕ ಮಹತ್ವ ಉಳ್ಳ ಸ್ಮಾರಕಗಳಾಗಿವೆ. ಎರಡಕ್ಕೂ ಶತಮಾನಕ್ಕಿಂತ ಹೆಚ್ಚು ವಯಸ್ಸಾಗಿದೆ. ಆದ್ದರಿಂದ ಕಾನೂನು ಪ್ರಕಾರ ಅವು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾಗಿವೆ.
ಈ ಸ್ಮಾರಕಗಳು ಎಂದೋ ಅಧ್ಯಯನಕ್ಕೊಳಪಡಬೇಕಾಗಿತ್ತು, ಜಿಲ್ಲೆಯ ಅಭಿಮಾನದ ಪ್ರವಾಸಿ ತಾಣಗಳಾಗಬೇಕಾಗಿತ್ತು, ಶಾಲಾ ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕವಾಗಿ ಪ್ರೇಕ್ಷಣೀಯ ಸ್ಥಳವಾಗಬೇಕಾಗಿತ್ತು. ಇವು ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕತೆಯನ್ನು ಮುಂದಿನ ಪೀಳಿಗೆಗೆ ಸಾರುವಂತೆ ರಕ್ಷಣೆಗೊಳಪಡಬೇಕಾಗಿತ್ತು.
ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಯತ್ನ: ಆದರೆ ಅಧ್ಯಯನ, ರಕ್ಷಣೆ ಬಿಡಿ, ಅವುಗಳನ್ನು ಕೆಡವಿ ಅಲ್ಲೊಂದು ಭವ್ಯವಾದ ಬ್ಯುಸಿನೆಸ್ ಕಾಂಪ್ಲೆಕ್ ನಿರ್ಮಿಸುವುದಕ್ಕೆ ನಮ್ಮ ಜನಪ್ರತಿನಿಧಿಗಳ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಉಡುಪಿಯ ಕೆಲವು ವಯೋವೃದ್ಧರ, ಅಧಿಕಾರಿಗಳ ಸಮಿತಿಯೂ ರಚನೆಯಾಗಿದೆ. ಅದರ ಸಭೆಯಲ್ಲಿ ಈ ಕಟ್ಟಡವನ್ನು ಕೆಡವಿ ನೆಲಸಮ ಮಾಡುವುದಕ್ಕೆ ಚರ್ಚೆ, ನಿರ್ಣಯಗಳೂ ನಡದಿವೆ. ನಿರ್ಣಯವಾಗಿ 2 ವರ್ಷಗಳೇ ಕಳೆದರೂ ಇನ್ನೂ ಅದು ಕಾರ್ಯರೂಪಕ್ಕೆ ಬಾರದಿರುವುದು ಸದ್ಯದ ಮಟ್ಟಿಗೆ ಅದೃಷ್ಟ ಎಂದೇ ಹೇಳಬೇಕು. ಪ್ರಸ್ತುತ ಈ ಕಟ್ಟಡದಲ್ಲಿ ಕಳೆದ ಐದಾರು ದಶಕಗಳಿಂದ ಸರ್ಕಾರಿ ಕಾಲೇಜಿನ ಕೆಲವು ತರಗತಿಗಳು ನಡೆಯುತ್ತಿವೆ. ಮೊನ್ನೆಯವರೆಗೆ ಇದೇ ಕಟ್ಟಡದಲ್ಲಿ ಜಿಲ್ಲಾ ಕಾಲೇಜು ಶಿಕ್ಷಣ ಇಲಾಖೆಯ ಕಚೇರಿಯೂ ಇತ್ತು. ಐದಾರು ಎಕ್ರೆಯಷ್ಟು ವಿಶಾಲವಾದ ಭೂಮಿ ಇದೆ, ಒಂದಷ್ಟು ಭೂಮಿ ಖಾಸಗಿಯವರಿಂದ ಅತಿಕ್ರಮಣಕ್ಕೂ ಒಳಗಾಗಿದೆ ಎಂಬ ಆರೋಪವೂ ಇದೆ.
ಹೀಗಿತ್ತು ಜೈಲು: ಬ್ರಿಟಿಷರ ಕಾಲದ ಅಂದರೆ ಸುಮಾರು 19ನೇ ಶತಮಾನ ವಾಸ್ತು ಶೈಲಿಯ ಕಟ್ಟಡ ಇದು. ಭದ್ರವಾದ, ಒಂದೂವರೆ ಅಡಿ ದಪ್ಪದ ಕಲ್ಲಿನ ಗೋಡೆಯ ಸುಮಾರು 10 ಜೈಲು ಕೋಣೆಗಳಿವೆ, ಅದಕ್ಕೆ ಹಾಕಲಾದ ಕಬ್ಬಿಣದ ಸರಳು ಇಂದಿಗೂ ಅಷ್ಟೇ ಭದ್ರವಾಗಿವೆ. ಕರಾವಳಿಯ ಹೆಮ್ಮೆಯ ಮಂಗಳೂರು ಹೆಂಚುಗಳನ್ನು ಮಾಡಿಗೆ ಹೊದಿಸಲಾಗಿದೆ. ಜೈಲು ಕಟ್ಟಡದ ಎರಡೂ ಪಕ್ಕದಲ್ಲಿ ನಾಲ್ಕೈದು ಆಳು ಎತ್ತರದ ಗೋಪುರಗಳಿವೆ, ಇಲ್ಲಿ ನೇಣು ಕಂಬಗಳಿದ್ದುವಂತೆ, ಇಂದು ಅವು ಶೌಚಾಲಯಗಳಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕದ ನಂತರದ ರಾಜ್ಯ ಪತ್ರ (ಗಜೇಟಿಯರ್)ದಲ್ಲಿಯೂ ಈ ಕಟ್ಟಡದ ಬಗ್ಗೆ ಉಲ್ಲೇಖಗಳಿವೆ. ಜನತಾ ಸಭಾಂಗಣದಲ್ಲಿ ನಡೆದ ಕರ್ನಾಟಕ ಏಕೀಕರಣದ ಸಭೆಗಳ ವರದಿಗಳು ಅಂದಿನ ಪತ್ರಿಕೆಗಳಲ್ಲಿ ವರದಿಯಾಗಿದ್ದವು.
ಒಟ್ಟಿನಲ್ಲಿ ಇಂತಹ ಕಟ್ಟಡವನ್ನು ಅರ್ಥಾತ್ ಜಿಲ್ಲೆಯ ಜನತೆಯ ಹೆಮ್ಮೆಯನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿಲ್ಲ, ಅದಕ್ಕೆ ಪುರಾವೆಗಳಿಲ್ಲ ಎಂದು ಒಪ್ಪಿಕೊಂಡು ತಲೆ ತಗ್ಗಿಸಬೇಕು.
ಪ್ರೇತಾತ್ಮ ಕಾಟವಂತೆ!
ಈ ಜೈಲು ಕಟ್ಟಡದಲ್ಲಿರುವ ನೇಣುಗಂಬದಲ್ಲಿ ಕೈದಿಗಳನ್ನು (ಸ್ವಾತಂತ್ರ್ಯ ಹೋರಾಟಗಾರರನ್ನು) ನೇಣು ಹಾಕಲಾಗುತ್ತಿತ್ತು. ಆದ್ದರಿಂದ ಅವರ ಪ್ರೇತಾತ್ಮಗಳು ಇಲ್ಲಿನ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿವೆ, ಆದ್ದರಿಂದ ಈ ಜೈಲನ್ನು ಕೆಡವಿ ಹಾಕುವುದೇ ಸೂಕ್ತ! ಇದು ಸಮಿತಿಯಲ್ಲಿದ್ದ ವಯೋವೃದ್ಧರೊಬ್ಬರು ಹೇಳಿದ ಮಾತು. ಇಂತಹ ಸ್ಮಾರಕವನ್ನು ಕೆಡಹುವುದಕ್ಕೆ ಅವರಿಗೆ ಬೇರೆ ಸುಳ್ಳು ಕಾರಣಗಳು ಸಿಕ್ಕಿಲಿಲ್ಲವೋ ಏನೋ.
-ಸುಭಾಶ್ಚಂದ್ರ ಎಸ್. ವಾಗ್ಳೆ