ಮುಂದಿನ ಚುನಾವಣೆಯೇ ಕೊನೆ ಅವಕಾಶ: ಉಪಾಧ್ಯಾಯ
ಹೆಬ್ರಿ: ಸಮೃದ್ಧ ಭಾರತ ನಿರ್ಮಾಣಕ್ಕೆ 2014ರ ಮಹಾಚುನಾವಣೆಯೇ ಕೊನೆಯ ಅವಕಾಶ. ನಮಗೆ ವಿಕಾಸ ಬೇಕು, ವಿನಾಶ ಬೇಡ. ವಿಕಾಸದ ಸ್ವರೂಪವೇ ನರೇಂದ್ರ ಮೋದಿ ಎಂದು ಸಂಸ್ಕಾರ ಭಾರತಿ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ.
ಹೆಬ್ರಿಯಲ್ಲಿ ಭಾನುವಾರ ನಮೋ ಬ್ರಿಗೇಡ್ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಯುವಕರು ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡು ಪರಿಶುದ್ಧ ಆಡಳಿತಕ್ಕೆ ಪ್ರಯತ್ನಿಸಬೇಕು ಎಂದ ಶ್ರೀಕಷ್ಣ ಉಪಾಧ್ಯಾಯ, ರಾಜಕೀಯ ಕಶ್ಮಲಗೊಳಿಸದಂತೆ ಎಚ್ಚರ ವಹಿಸಬೇಕಿದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಭಾರತ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಅಲ್ಪಸಂಖ್ಯಾತರ ತುಷ್ಟೀಕರಣ, ಹಿಂದೂ ವಿರೋಧಿ ಭಾವನೆಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೊಂದಲ ನಿರ್ಮಿಸುತ್ತಿವೆ. ಅಪ್ಪಟ ಸ್ವದೇಶಿ, ಸಮೃದ್ಧಿಯ ಚಿಂತನೆ ಹೊಂದಿದ ಮೋದಿ ಜೀವಕ್ಕೂ ಅಪಾಯ ಬಂದೊದಗಿದ್ದು ದುರಾದೃಷ್ಟ ಎಂದು ಹೇಳಿದರು.
ಅಕ್ಷಯಾ ಗೋಖಲೆ ಮಾತನಾಡಿದರು. ಹೆಬ್ರಿ ವಲಯದ 25ಕ್ಕೂ ಮಿಕ್ಕಿದ ಸೈನಿಕರು, ಮಾಜಿ ಸೈನಿಕರು ಹಾಗೂ ಸೈನಿಕರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಹುತಾತ್ಮ ಯೋಧ ನಾಡ್ಪಾಲು ಉದಯ ಪೂಜಾರಿ ಅವರ ತಂದೆ ಬೀರ ಪೂಜಾರಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಹೆಬ್ರಿ ವಲಯದ ಮುದ್ರಾಡಿ, ಕಬ್ಬಿನಾಲೆ, ವರಂಗ, ಮುನಿಯಾಲು, ಅಜೆಕಾರು, ಸೋಮೇಶ್ವರ, ನಾಡ್ಪಾಲು, ಶಿವಪುರ, ಪಾಡಿಗಾರ, ಪೆರ್ಡೂರು, ಸಂತೆಕಟ್ಟೆ, ಬೇಳಂಜೆ, ಕುಚ್ಚೂರು ಘಟಕಗಳ ನಮೋ ಬ್ರಿಗೇಡ್ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಲಯದ ಕಾರ್ಯದರ್ಶಿ ರಾಘವೇಂದ್ರ ರಾವ್ ಸ್ವಾಗತಿಸಿದರು. ಸಂಚಾಲಕ ರಾಘವೇಂದ್ರ ಶೆಟ್ಟಿ ವಂದಿಸಿದರು. ವೀಣಾ ಪ್ರಭು ವಂದೇ ಮಾತರಂ ಹಾಡಿದರು. ವಕ್ತಾರ ಶ್ರೀಕಾಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಹಾಸ್ ಶೆಟ್ಟಿ ಮುಟ್ಲಪಾಡಿ ನಿರೂಪಿಸಿದರು.