ಉಡುಪಿ: ಶಾಂತಿಗಾಗಿ ವಿಶ್ವಾಸದ ರ್ಯಾಲಿ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಯುವ ವಿದ್ಯಾರ್ಥಿ ಸಂಚಾಲನ ವತಿಯಿಂದ 'ವಿಶ್ವಾಸದ ವರ್ಷ'ದ ಸಮಾರೋಪದ ಅಂಗವಾಗಿ 'ಶಾಂತಿಗಾಗಿ ವಿಶ್ವಾಸದ ರ್ಯಾಲಿ' ಶನಿವಾರ ನಗರದಲ್ಲಿ ನಡೆಯಿತು.
ರ್ಯಾಲಿಯನ್ನು ಉದ್ಘಾಟಿಸಿದ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ಯುವಜನತೆಯನ್ನು ಉದ್ದೇಶಿಸಿ, ದೇವರು ಮಾನವ ಸಮುದಾಯಕ್ಕೆ ನೀಡಿದ ವಿಶೇಷ ವರ ಶಾಂತಿ, ಇಂದು ದೇಶದಲ್ಲಿ ಶಾಂತಿ ಸಮಾಧಾನದ ಅಗತ್ಯತೆ ಇದೆ ಎಂದು ಹೇಳಿದರು.
ಯುವಜನರು ಭಗವಂತನ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರಬೇಕು. ಪೋಪ್ ಅದೇಶದಂತೆ ಕಳೆದ ಒಂದು ವರ್ಷವನ್ನು ಕ್ರೈಸ್ತ ಸಮುದಾಯ ವಿಶ್ವಾಸದ ವರ್ಷವಾಗಿ ಆಚರಿಸಿದ್ದು, ಇದಕ್ಕೆ ಕಾರಣರಾದವರೆಲ್ಲರಿಗೂ ಅಭಿನಂದಿಸಿದರು.
ರ್ಯಾಲಿಯು ಉಡುಪಿ ಶೋಕಮಾತಾ ಇಗರ್ಜಿಯಿಂದ ಆರಂಭವಾಗಿ, ಡಯಾನಾ ಸರ್ಕಲ್, ಬಿಗ್ ಬಜಾರ್, ಕಿನ್ನಿಮೂಲ್ಕಿ ಮಾರ್ಗವಾಗಿ ಕನ್ನರ್ಪಾಡಿ ಸೈಂಟ್ ಮೇರಿಸ್ ಶಾಲೆಯಲ್ಲಿ ಸಮಾಪನಗೊಂಡಿತು. ಸುಮಾರು 700ಕ್ಕೂ ಅಧಿಕ ಯುವಜನರು ಧರ್ಮಪ್ರಾಂತ್ಯದ 5 ವಲಯಗಳಿಂದ ರ್ಯಾಲಿಯಲ್ಲಿ ಭಾಗವಹಿಸಿದರು.
ರ್ಯಾಲಿಯ ಬಳಿಕ ಯುವಜನರಿಗಾಗಿ ಗ್ರಾಮೀಣ ಕ್ರೀಡೋತ್ಸವ ಕನ್ನರ್ಪಾಡಿ ಶಾಲೆಯ ಮೈದಾನದಲ್ಲಿ ನಡೆಯಿತು. ಇದರಲ್ಲಿ ಲಗೋರಿ, ಕುಟ್ಟಿ ದೊಣ್ಣೆ, ಜಿಬಿಲಿ, ಕಬಡಿ, ಚನ್ನೆಮಣೆ, ಪಲ್ಲೆಯಾಟ, ಹಗ್ಗಜಗ್ಗಾಟ, ಸೊಪ್ಪಾಟ, ಪಿಲ್ಚೆಂಡು ಇತ್ಯಾದಿ ಆಟಗಳನ್ನು ನಡೆಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ. ಬ್ಯಾಪಿಸ್ಟ್ ಮಿನೇಜಸ್, ಕರ್ನಾಟಕ ರಾಜ್ಯ ಯುವ ಆಯೋಗದ ನಿರ್ದೇಶಕಿ ಮರಿ ಜೋಸೆಫ್, ಉಡುಪಿ ಚರ್ಚ್ನ ಧರ್ಮಗುರುಗಳಾದ ಫ್ರೆಡ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಿಲ್ಸನ್, ಚರ್ಚ್ ಪಲನಾ ಮಂಡಳಿಯ ಉಪಾಧ್ಯಕ್ಷ ಬೊನಿಫಾಸ್ ಡಿ' ಸೋಜಾ, ಫ್ರ್ಯಾಂಕಿ ಫೆರ್ನಾಂಡಿಸ್, ಶಾಲೆಯ ಮುಖ್ಯೋಪಾಧ್ಯಾಯಿನಿ ಮರ್ಟಲ್ ಲೂವಿಸ್, ಡೆನಿಸ್ ಡೆಸಾ, ವೈಸಿಎಸ್ ಧರ್ಮಪ್ರಾಂತ್ಯದ ಅಧ್ಯಕ್ಷ ಎಲ್ಸನ್ ಡಿ' ಸೋಜಾ ಇದ್ದರು.
ಕಾರ್ಯದರ್ಶಿ ಶೈನಿ ಕ್ಯಾಸ್ತಲಿನೊ ಸ್ವಾಗತಿಸಿ, ಲೆಸ್ಲಿ ಆರೋಜಾ ವಂದಿಸಿದರು.