ಕಟಪಾಡಿ: ಮೋದಿ ಬ್ಯಾನರ್‌ಗೆ ಹಾನಿ
ಕಟಪಾಡಿ: ಇಲ್ಲಿನ ಪರಿಸರದಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಶುಭಕೋರುವ 3 ಬ್ಯಾನರ್‌ಗಳಿಗೆ ಕಿಡಿಗೇಡಿಗಳು ಹಾನಿ ಎಸಗಿದ್ದು, ಇದಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ಈ ಬ್ಯಾನರ್‌ಗಳ ಸ್ಥಳಕ್ಕೆ ಭೇಟಿ ನೀಡಿದ್ದ, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಬ್ಯಾನರುಗಳನ್ನು ಕಟ್ಟುವುದು ಅಭಿವ್ಯಕ್ತಿ ಸ್ವಾತಂತ್ರವಾಗಿದ್ದು, ಇದಕ್ಕೆ ವಿರುದ್ಧವಾಗಿ ಕಿಡಿಗೇಡಿಗಳು ಹಾನಿಮಾಡಿದ್ದಾರೆ. ಅದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, ಕಟಪಾಡಿಯಲ್ಲಿ ನರೇಂದ್ರ ಮೋದಿ ಅವರ ಬ್ಯಾನರುಗಳನ್ನು ಕಟಪಾಡಿ ಪೇಟೆ, ಮಾರುಕಟ್ಟೆ ಹಾಗೂ ಫಾರೆಸ್ಟ್ ಗೇಟಿನಲ್ಲಿ ಹಾಕಿದ್ದಾರೆ. ಶುಕ್ರವಾರ ರಾತ್ರಿ ಚೂರಿಯಿಂದ ಮೂರು ಬ್ಯಾನರನ್ನು ಹಾಳು ಮಾಡಿದ್ದಾರೆ. ನಾವು ಪೊಲೀಸರಿಗೆ ಮಾಹಿತಿ ನೀಡಿದ್ದು, ಲಿಖಿತವಾಗಿ ದೂರು ಅರ್ಜಿ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭ ನಾಗೇಶ್ ಕಟಪಾಡಿ, ಮುರಳಿಧರ್ ಪೈ, ವಿಜಯ ಅಗ್ರಹಾರ ಇದ್ದರು.
ಉಡುಪಿಯಲ್ಲಿ ಬ್ಯಾನರು ವಿವಾದ: ಉಡುಪಿ ನಗರದ ಕೆಲವೆಡೆ ಮೋದಿಯ ವಿರುದ್ಧ ಬ್ಯಾನರುಗಳು ಪ್ರತ್ಯಕ್ಷವಾಗಿದ್ದು, ಇದರಲ್ಲಿ ಬಿಜೆಪಿಯ ಅಧಿಕೃತ ಪ್ರಧಾನ ಮಂತ್ರಿ ಅಭ್ಯರ್ಥಿ ಮೋದಿ ಅವರನ್ನು ಅವಮಾನಗೊಳಿಸುವ ಬರಹ ಇದೆ ಎಂದು ಜಿಲ್ಲಾ ಬಿಜೆಪಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ಎಂಬ ಹೆಸರಿನಲ್ಲಿ ಈ ಬ್ಯಾನರುಗಳನ್ನು ಹಾಕಲಾಗಿದ್ದು, ಇದರಲ್ಲಿ ಮೋದಿ ಅವರನ್ನು ರಾಕ್ಷಸನಂತೆ ಚಿತ್ರಿಸಲಾಗಿದೆ. ಈ ಬ್ಯಾನರುಗಳ ಬಗ್ಗೆ ನಗರಸಭೆಯಿಂದ ಪರವಾನಗಿಯನ್ನೂ ಪಡೆಯಲಾಗಿಲ್ಲ, ದಸಂಸ (ಅಂಬೇಡ್ಕರ್ ವಾದ) ಇದರ ಉಡುಪಿಯ ಪದಾಧಿಕಾರಿಗಳೂ ಈ ಬ್ಯಾನರುಗಳ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ಅಕ್ರಮ ಬ್ಯಾನರು ಕಟ್ಟಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.